ಚಿಕ್ಕಮಗಳೂರು: ಗೋಕಳ್ಳರ ಹಾವಳಿಯಿಂದ ಅಜ್ಜಿಯ ಸ್ವಾಭಿಮಾನದ ಬದುಕಿಗೆ ಕುತ್ತು
ಚಿಕ್ಕಮಗಳೂರು, ಅಕ್ಟೋಬರ್ 27: ಕಾಫಿನಾಡಿನಲ್ಲಿ ಹಸುಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರೋರಾತ್ರಿ ಕೊಟ್ಟಿಗೆಯಲ್ಲಿರುವ ಅಥವಾ ರಸ್ತೆ ಬದಿಯಲ್ಲಿ ಮೇಯಿತ್ತಿರುವ ಹಸುಗಳ ಮೇಲೆ ದಾಳಿ ಮಾಡುವ ದನಗಳ್ಳರ ಅಟ್ಟಹಾಸಕ್ಕೆ ಗೋವುಗಳು ಬಲಿಯಾಗುತ್ತಿವೆ.
ಇದು ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುತ್ತಿದ್ದ ಅದೆಷ್ಟೋ ಕುಟುಂಬಗಳ ಬದುಕಿಗೆ ದೊಡ್ಡ ಪೆಟ್ಟು ನೀಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ನಿವಾಸಿಯಾದ ಲಕ್ಷ್ಮೀದೇವಿ.
ತನ್ನ ಇಳಿ ವಯಸ್ಸಿನಲ್ಲಿ ಯಾರ ಹಂಗಿನಲ್ಲೂ ಇರದೇ ಲಕ್ಷ್ಮೀದೇವಿ 10ಕ್ಕೂ ಹೆಚ್ಚು ಹಸುಗಳನ್ನು ಸಾಕಿ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆ ಹಸುಗಳೇ ಆಕೆಯ ಜೀವನಕ್ಕೆ ಆಧಾರ ಹಾಗೂ ಬಂಧು-ಬಳಗ, ಮಕ್ಕಳು ಎಲ್ಲಾ ಎಂಬಂತಿತ್ತು. ಹೈನುಗಾರಿಕೆಯಿಂದ ಯಾರ ಬಳಿಯೂ ಕೈಚಾಚದೇ ತನ್ನ ಸ್ವಂತ ದುಡಿಮೆಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ದನಗಳ್ಳರ ಹಾವಳಿಯಿಂದ ಇಳಿವಯಸ್ಸಿನಲ್ಲಿ ಲಕ್ಷ್ಮಿದೇವಿ ಬೇರೆಯವರ ಮನೆಗೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ.

ಕಳೆದ ಎರಡು ವರ್ಷದಲ್ಲಿ ಲಕ್ಷ್ಮೀದೇವಿ ಬದುಕೇ ಅತಂತ್ರವಾಗಿದೆ. ಈ ಅಜ್ಜಿಯ ಬದುಕಿನ ಅಧಾರವಾಗಿದ್ದ ರಾಸುಗಳನ್ನು ಗೋ ಕಳ್ಳರು ಕದ್ದಿದ್ದಾರೆ. ಕಳೆದ ಎರಡ್ಮೂರು ತಿಂಗಳಲ್ಲೇ ಸುಮಾರು ನಾಲ್ಕು ಹಸುಗಳನ್ನು ಕದ್ದಿದ್ದಾರೆ. ಕಳೆದ ಎರಡು ವರ್ಷದಿಂದ 10 ಹಸುಗಳು ಗೋಕಳ್ಳರ ಪಾಲಾಗಿದೆ. ಮೇಯಲು ಹೋದ ಹಸುಗಳಿಂದ ಹಿಡಿದು ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಸಹ ಬಿಡದೇ ಕದ್ದೊಯ್ಯಲಾಗಿದೆ. ಒಂಟಿ ಅಜ್ಜಿಯ ದೌರ್ಬಲ್ಯವನ್ನು ಅರಿತ ಗೋಕಳ್ಳರು ಲಕ್ಷ್ಮಿದೇವಮ್ಮರ ಸ್ವಾಭಿಮಾನದ ಬದುಕಿಗೆ ಪೆಟ್ಟು ನೀಡಿದೆ ಎಂದು ಅವರು ಕಣ್ಣೀರಾಗುತ್ತಾರೆ.
ಗೋಕಳ್ಳರು ಅಜ್ಜಿಯ ಸಾಕಿದ್ದ ಎಳೆಯ ಕರು ಸೇರಿದಂತೆ, ದೇವರಿಗೆ ಅರ್ಪಿಸಿದ್ದ ಬಸವನನ್ನು ಬಿಟ್ಟಿಲ್ಲ. ಹೈಟೆಕ್ ಕಾರಿನಲ್ಲಿ ಬರುವ ಕಳ್ಳರು ಮನೆ ಮುಂದೆ ಮಲಗಿದ್ದ ರಾಸುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಗೋಕಳ್ಳರ ಗೋಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಲಕ್ಷ್ಮಿದೇವಮ್ಮರ ಬಳಿ ಇದ್ದ 11 ಹಸುಗಳಲ್ಲಿ ಈಗ ಒಂದು ಹಸು ಮಾತ್ರ ಬಾಕಿ ಇದೆ. ಒಂದೊಂದು ಹಸು ಕಳ್ಳತನವಾದಾಗಲೂ ಅಜ್ಜಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಜೊತೆಗೆ ಪೊಲೀಸ್ ಇಲಾಖೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಭೆ ನಡೆಸಿದಾಗಲೂ ಮನವಿ ಸಲ್ಲಿಸಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರಯೀಜನವಾಗಿಲ್ಲ ಎಂದು ಲಕ್ಷ್ಮಿದೇವಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಹಸುಗಳನ್ನು ಸಾಕಿಕೊಂಡು ಹಾಲು ಮಾರಿ ಜೀವನ ಸಾಗಿಸುತ್ತಿದ್ದ ಲಕ್ಷ್ಮಿದೇವಿ ಈಗ ಹೊಟ್ಟೆಪಾಡಿಗಾಗಿ ಮನೆಗೆಲಸಕ್ಕೆ ಹೋಗುತ್ತಿದ್ದಾರೆ. ಪ್ರತಿಬಾರಿ ಹಸು ಕಳ್ಳತವಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ, ಕಳ್ಳರನ್ನು ಈವರೆಗೆ ಬಂಧಿಸಿಲ್ಲ. ತೀರಾ ಬಡತನದಲ್ಲಿರುವ ಈ ತಾಯಿಗೆ ಆಸರೆಯಾಗಿದ್ದ ಗೋಮಾತೆಗಳು ಕಳ್ಳರ ಪಾಲಾಗಿದ್ದು ಮಾತ್ರ ದುರಂತ.

ಎನ್.ಆರ್. ಪುರದಲ್ಲಿ ಕುವೆಂಪು ಪುತ್ಥಳಿ ತೆರವು
ರಾತ್ರಿ ಪ್ರತಿಷ್ಠಾಪಿಸಿದ್ದ ಕುವೆಂಪು ಪುತ್ಥಳಿಯನ್ನು ಬೆಳಗ್ಗೆ ತೆರವುಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬೈಪಾಸ್ ಸರ್ಕಲ್ ಬಹಳ ದಿನಗಳಿಂದ ವಿವಾದಕ್ಕೀಡಾದ ಜಾಗವಾಗಿತ್ತು. ಒಂದೊಂದು ವರ್ಗದ ಜನ ಒಬ್ಬೊಬ್ಬರ ಪುತ್ಥಳಿ ನಿರ್ಮಿಸಬೇಕೆಂದು ಚಿಂತಿಸಿದ್ದರು.
ಆದರೆ, ಕರವೇ ಕಾರ್ಯಕರ್ತರು ಕಳೆದ ರಾತ್ರಿ ಯಾರ ಪುತ್ಥಳಿಯೂ ಬೇಡ. ಕುವೆಂಪು ನಮ್ಮ ಭಾಗದ ವಿಶ್ವಮಾನವ ಕವಿ. ಅವರ ಪುತ್ಥಳಿಯೇ ಸಾಕು ಎಂದು ಕಳೆದ ರಾತ್ರಿ ಕುವೆಂಪು ಪುತ್ಥಳಿ ಹಾಗೂ ಕನ್ನಡ ಧ್ವಜವನ್ನ ಪ್ರತಿಷ್ಠಾಪಿಸಿದ್ದರು.
ಬೆಳಗಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕುವೆಂಪು ಪುತ್ಥಳಿಯನ್ನು ತೆರವುಗೊಳಿಸಿದ್ದಾರೆ. ತೆರವುಗೊಳಿಸಿ ಕುವೆಂಪುರವರ ಪುತ್ಥಳಿಯನ್ನು ಕಸದ ಗಾಡಿಯಲ್ಲಿ ಕೊಂಡೊಯ್ದಿದ್ದಾರೆಂದು ಕರವೇ ಕಾರ್ಯಕರ್ತರು ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಅದೇ ಬೈಪಾಸ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಇಲ್ಲಿ ಕುವೆಂಪು ಬಿಟ್ಟು ಬೇರೆ ಯಾರ ಪುತ್ಥಳಿಯನ್ನೂ ನಿರ್ಮಿಸುವಂತಿಲ್ಲ ಎಂದು ಆಗ್ರಹಿಸಿ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.
Recommended Video












Click it and Unblock the Notifications