ಬಲ್ಲಾಳ ರಾಯನದುರ್ಗಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಯುವಕರು ನಾಪತ್ತೆ
ಚಿಕ್ಕಮಗಳೂರು, ಸೆಪ್ಟೆಂಬರ್ 27: ಬಲ್ಲಾಳ ರಾಯನದುರ್ಗಕ್ಕೆ ಟ್ರೆಕ್ಕಿಂಗ್ ಹೋಗಿದ್ದ ನಾಲ್ವರು ಯುವಕರು ವಾಪಸ್ ಬರಲು ದಾರಿ ಗೊತ್ತಾಗದೆ ಬೆಟ್ಟದಲ್ಲೇ ದಾರಿತಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದ ರಾಣಿಝರಿ ಪ್ರದೇಶದಲ್ಲಿ ನಡೆದಿದೆ.
ಬಲ್ಲಾಳ ರಾಯನದುರ್ಗವು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಲ್ಲಾಳ ರಾಯನದುರ್ಗ ಬೆಟ್ಟದ ತುದಿಗೆ ಹೋದರೆ ಪ್ರಕೃತಿಯ ಸೊಬಗನ್ನು ಸವಿಯಬಹುದು. ಆದರೆ ಇಲ್ಲಿಗೆ ಹೋಗುವ ಮಾರ್ಗ ಕೂಡ ಅತಿ ದುಸ್ಥರವಾಗಿದೆ. ಹೊಸಬರು ಹೋಗಬೇಕೆಂದರೆ ಹುಷಾರಾಗಿ ಹೋಗಿ ಬರಬೇಕು.
ಇಲ್ಲಿ ಫೋನ್ ಸಂಪರ್ಕ ಕೂಡ ಸಿಗಲ್ಲ, ಸಿಕ್ಕರೂ ಅಲ್ಲೊಂದು, ಇಲ್ಲೊಂದು ಪಾಯಿಂಟ್ ನೆಟ್ ವರ್ಕ್ ಸಿಗುತ್ತದೆ. ಆದರೆ ಇಲ್ಲಿನ ಸೌಂದರ್ಯ ಸವಿಯಲು ಹೋದ ಚಿಕ್ಕಮಗಳೂರಿನ ನಾಲ್ವರು ಯುವಕರು ವಾಪಸ್ ಬರಲು ದಾರಿ ಗೊತ್ತಾಗದೆ ಅಲ್ಲೇ ಉಳಿದಿದ್ದರು.

ದಾರಿ ಹುಡುಕಿಕೊಂಡು ಮತ್ತೆಲ್ಲಿಗೆ ಹೋಗಿದ್ದಾರೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲ. ಕೆಲವೆಡೆ ಸಿಕ್ಕ ನೆಟ್ ವರ್ಕ್ ನಿಂದ ಅವರು ದಾರಿ ತಪ್ಪಿದ್ದಾರೆಂಬುದು ಗೊತ್ತಾಗಿತ್ತು.
ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳು ನಾಪತ್ತೆಯಾಗಿರುವ ಯುವಕರಿಗಾಗಿ ಹುಡುಕಾಟ ಆರಂಭಿಸಿದ್ದರು. ರಾಣಿಝರಿಗೆ ಹೋದ ಯುವಕರು ಅಲ್ಲಿಂದ ಬಲ್ಲಾಳರಾಯನ ದುರ್ಗಕ್ಕೆ ಹೋಗುವಾಗ ದಾರಿ ತಪ್ಪಿದ್ದರು. ಅಲ್ಲಿಂದ ವಾಪಸ್ ಕೊಟ್ಟಿಗೆಹಾರಕ್ಕೂ ಬರಲು ದಾರಿ ಗೊತ್ತಾಗದೆ ಕತ್ತಲಲ್ಲಿ ಕಂಗಾಲಾಗಿದ್ದರು.

ಮೊಬೈಲ್ ನೆಟ್ ವರ್ಕ್ ಸಿಗುತ್ತಿದ್ದರೂ, ಆದರೆ ನಾಪತ್ತೆಯಾಗಿರುವ ಯುವಕರು ತಾವಿರುವ ಜಾಗದ ಬಗ್ಗೆ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಹುಡುಕುವವರು ಕೂಡ ಎಲ್ಲಿದ್ದಾರೆಂದು ಗೊತ್ತಾಗದೇ ಸುಸ್ತಾದರು.
ದಾರಿಕಾಣದ ನಾಪತ್ತೆಯಾಗಿರೋ ಯುವಕರು ಸಹಾಯಕ್ಕಾಗಿ ಬೇಡಿಕೊಂಡಿದ್ದರು. ಆದರೆ ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳಿಗೂ ಕೂಡ ಅವರಿರುವ ಜಾಗದ ಮಾಹಿತಿ ಸಿಗದೆ ಹುಡುಕುವುದು ಕಷ್ಟವಾಗಿತ್ತು. ಸದ್ಯ ನಾಪತ್ತೆಯಾದ ಯುವಕರು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.












Click it and Unblock the Notifications