100 ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಶೃಂಗೇರಿಯಲ್ಲಿ ಪ್ರತಿಭಟನೆ: ತಮಟೆ ಬಡಿದು ಯುವಕರ ಆಕ್ರೋಶ
ಚಿಕ್ಕಮಗಳೂರು, ನವೆಂಬರ್ 24 : ಜಿಲ್ಲೆಗೆ 100 ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಸರ್ಕಾರ ಮೈಕ್ ಸೆಟ್ ಬಳಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಯುವಕರು ತಮಟೆ ಬಾರಿಸಿಕೊಂಡು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ವರ್ಷವೂ ಶೃಂಗೇರಿಯ ಸಮಾನ ಮನಸ್ಕ ಯುವಕರ ತಂಡ 100 ಬೆಡ್‌ನ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಸರ್ಕಾರದಿಂದ ಆಸ್ಪತ್ರೆ ನಿರ್ಮಾಣದ ಸಿದ್ಧತೆ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈ ವರ್ಷವೂ ಯುವಕರ ತಂಡ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಶೃಂಗೇರಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಊರಾಗಿದೆ. ಶೃಂಗೇರಿ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರ. ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ರಸ್ತೆಗಳು ಮೊದಲೇ ಹದಗೆಟ್ಟಿದ್ದು, ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸುವಂತೆ ಭಿತ್ತಿಪತ್ರಗಳನ್ನು ಹಾಕಲಾಗಿದೆ. ಆದರೂ ಕೂಡ ವಾಹನ ಚಲಾವಣೆ ವೇಳೆ ಏನಾದರೂ ಅಪಘಾತ ಸಂಭವಿಸಿದರೆ, ಅಥವಾ ಇಲ್ಲಿನ ಜನತೆ ಕಾಯಿಲೆಗೆ ಬಿದ್ದರೆ, ಶಿವಮೊಗ್ಗ, ಉಡುಪಿ ಅಥವಾ ಮಂಗಳೂರಿಗೆ ಆಸ್ಪತ್ರೆಗೆ ತೆರಳಬೇಕು. ಹೀಗಾಗಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಿಸುವಂತೆ ಸಮಾನ ಮನಸ್ಕ ಯುವಕರ ತಂಡ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ.

ಕಳೆದ ವರ್ಷ ಸಹ ಮನಸ್ಕ ಯುವಕರ ತಂಡ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸರ್ಕಾರ ಹಾಗೂ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ಆಸ್ಪತ್ರೆಯನ್ನು ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಶೃಂಗೇರಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಒಂದು ವರ್ಷವಾದರೂ ಆಸ್ಪತ್ರೆ ನಿರ್ಮಾಣದ ಸಿದ್ಧತೆಗಳು ಆಗದ ಕಾರಣ ಯುವಕರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ಕಳೆದ ರಾತ್ರಿ ಶೃಂಗೇರಿಯ ಪ್ರಮುಖ ಬೀದಿಗಳಲ್ಲಿ ತಮಟೆ ಭಾರಿಸಿಕೊಂಡು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇನ್ನಾದರೂ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಶೃಂಗೇರಿಯಲ್ಲಿ 100 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆಯತ್ತ ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.












Click it and Unblock the Notifications