ಶೃಂಗೇರಿಯಲ್ಲಿ ಇನ್ಮುಂದೆ ಶಂಕರಾಚಾರ್ಯರ ದರ್ಶನ: ಶಾರದಾಂಬೆ ಕ್ಷೇತ್ರದಲ್ಲಿ ಐತಿಹಾಸಿಕ ಗಳಿಗೆಗೆ ಕ್ಷಣಗಣನೆ
ಚಿಕ್ಕಮಗಳೂರು, ನವೆಂಬರ್ 10: ಇಷ್ಟು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ವಿದ್ಯಾದಿದೇವತೆ ಶಾರದಾಂಬೆ ದರ್ಶನ ಪಡೆಯುತ್ತಿದ್ದ ನೀವು ಇನ್ಮುಂದೆ ಸಿದ್ಧಾಂತಗಳಲ್ಲೇ ಪ್ರಾಚೀನ ಸಿದ್ಧಾಂತವಾದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು.
ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪದಂತೆ 45 ಕೋಟಿ ವೆಚ್ಚದ ಎರಡು ಎಕರೆ ವಿಸ್ತೀರ್ಣದಲ್ಲಿ ಬೃಹತ್ ಹಾಗೂ ಸುಂದರವಾಗಿ ನಿರ್ಮಾಣಗೊಂಡಿರೋ 32 ಅಡಿಯ ಶಂಕರಾಚಾರ್ಯರ ಪ್ರತಿಮೆ ಇಂದು ಲೋಕರ್ಪಣೆಗೊಳ್ಳಲಿದೆ.

ಶೃಂಗೇರಿಯಿಂದ ಎರಡು ಕಿ.ಮೀ. ದೂರದ ವಿದ್ಯಾರಣ್ಯಪುರದ ಹನುಮಗಿರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಜೊತೆ ಅವರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯರು, ತೋಟಕಾಚಾರ್ಯರು, ಪದ್ಮಪಾದಚಾರ್ಯರು, ಹಸ್ತಮಲಕಾಚಾರ್ಯರು ಮೂರ್ತಿಯೂ ಅನಾವರಣಗೊಳ್ಳಲಿದೆ. ಇವರ ಜೊತೆ, ವಿಜಯನಗರ ಸಾಮ್ರಾಜ್ಯದ ರೂವಾರಿಗಳಾದ ಜಗದ್ಗುರು ವಿದ್ಯಾರಣ್ಯರ ಮೂರ್ತಿಯೂ ಕೂಡ ಲೋಕಾರ್ಪಣೆಗೊಳ್ಳಲಿದೆ.
ವಿದ್ಯಾರಣ್ಯರು ಶಂಕರಾಚಾರ್ಯರ ಶಿಷ್ಯರಾಗಿದ್ದು 10ನೇ ಜಗದ್ಗುರುಗಳಾಗಿದ್ದಾರೆ. ಹನುಮಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಜಗದ್ಗುರುಗಳ ಜೊತೆ ಹನುಮನ ಮೂರ್ತಿ ಕೂಡ ನಿರ್ಮಾಣವಾಗಿದೆ. ಇಂದು ಭಾರತೀತೀರ್ಥ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲಿರುವ ಈ ಸುಂದರ ತಾಣಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

15 ದಿನಗಳ ಬಳಿಕ ನಾಡಿನ ಜನ ಈ ತಾಣದ ಸೌಂದರ್ಯವನ್ನು ಸವಿಯಬಹುದು. 2013ರಿಂದ ನಡೆಯುತ್ತಿದ್ದ ಕೆಲಸ ಇದೀಗ ಸಂಪೂರ್ಣ ಮುಕ್ತಾಯಗೊಂಡು ಇಂದು ಲೋಕಾರ್ಪಣೆಗೊಳ್ಳಲಿದೆ. ಶ್ರೀ ಭಾರತೀತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ ಸುವರ್ಣ ಮಹೋತ್ಸವದ ಹೊತ್ತಲ್ಲೆ ಶಂಕರಾಚಾರ್ಯರ ಸುಂದರ ಪ್ರತಿಮೆ ಅನಾವರಣಗೊಳ್ಳಲಿದೆ.
45 ಕೋಟಿ ರೂಪಾಯಿ ವೆಚ್ಚದ 2 ಎಕರೆ ವಿಸ್ತೀರ್ಣದಲ್ಲಿ ಮೂರ್ತಿ ನಿರ್ಮಾಣವಾಗಿದೆ. ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆ ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.
ಈ ಹನುಮಗಿರಿ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು-ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ಶೃಂಗೇರಿ ಮಠದ 36ನೇ ಜಗದ್ಗುರುಗಳಾದ ಭಾರತೀತೀರ್ಥ ಶ್ರೀಗಳು 1974ರ ನವೆಂಬರ್ 11ರಂದು ಸನ್ಯಾಸ ಸ್ವೀಕರಿಸಿದ್ದರು. ಅವರು ಸನ್ಯಾಸ ಸ್ವೀಕರಿಸಿ 50ನೇ ವರ್ಷದ ಸ್ವರ್ಣ ಮಹೋತ್ಸವದ ಅಂಗವಾಗಿ ಶಂಕರರ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ.












Click it and Unblock the Notifications