ಸಖರಾಯಪಟ್ಟಣಕ್ಕೆ ಧರ್ಮೇಗೌಡ ಪಾರ್ಥಿವ ಶರೀರ ಆಗಮನ: ಅಂತಿಮ ದರ್ಶನ ಪಡೆದ ಸಿಎಂ
ಚಿಕ್ಕಮಗಳೂರು, ಡಿಸೆಂಬರ್ 29: ಮೃತ ಉಪ ಸಭಾಪತಿ ಎಸ್.ಎಲ್ ಧರ್ಮೇಗೌಡ ಅವರ ಪಾರ್ಥಿವ ಶರೀರ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಖರಾಯಪಟ್ಟಣಕ್ಕೆ ಆಗಮಿಸಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಧರ್ಮೇಗೌಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಶಿವಮೊಗ್ಗದ ಮೆಗ್ಗಾನ್ ನಿಂದ ಹೊರಟು ಸಖರಾಯಪಟ್ಟಣಕ್ಕೆ ಪಾರ್ಥಿವ ಶರೀರ ಆಗಮಿಸಿದ್ದು, ಇಲ್ಲಿನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಪರಿಷತ್ ಘಟನೆ ಬಳಿಕ ನೊಂದು ಹೋಗಿದ್ದ ಎಸ್. ಎಲ್. ಧರ್ಮೇಗೌಡ
ಪಾರ್ಥಿವ ಶರೀರದ ದರ್ಶನಕ್ಕೆ ರಾಜಕೀಯ ಗಣ್ಯರು ಹಾಗೂ ಸಾರ್ವಜನಿಕರು ಕಾದು ಕುಳಿತಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಮಾಧುಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಪಾಟೀಲ್, ಸಿ.ಟಿ ರವಿ ಸೇರಿದಂತೆ ಹಲವು ಜನ ಗಣ್ಯರು ಭಾಗಿಯಾಗಿದ್ದಾರೆ.
ಸಿ.ಎಂ ಸೇರಿದಂತೆ ಅನೇಕ ಗಣ್ಯರು ಆಗಮಿಸುವ ಹಿನ್ನೆಲೆ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಇದೇ ವೇಳೆ ಅಪ್ಪನನ್ನು ನೆನೆದು ಮಗ ಸೋನಾಲ್ ಧರ್ಮೇಗೌಡ ಕಣ್ಣೀರಿಟ್ಟರು. ಪಾರ್ಥಿವ ಶರೀರದ ಮುಂದೆ ಬಿಕ್ಕಳಿಸಿ ಅಳುತ್ತಿರುವ ದೃಶ್ಯ ಮನ ಕಲಕುವಂತಿತ್ತು.
ಅಣ್ಣನ ಪಾರ್ಥಿವ ಶರೀರ ಕಂಡು ಅತ್ತ ಎಸ್.ಎಲ್ ಬೋಜೇಗೌಡ ಸಹ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್ ಕುಮಾರ ಕಟೀಲ್ ಅವರು ಧರ್ಮೇಗೌಡ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಿ.ಟಿ.ರವಿ, ಸಚಿವ ಮಾಧುಸ್ವಾಮಿ ಹಾಗೂ ಶಾಸಕರು ಹಾಜರಿದ್ದರು.