ಸಿದ್ದರಾಮಯ್ಯನವರೇ ಎಲ್ಲರೂ ನಿಮ್ಮ, ನಮ್ಮ ಹಾಗೆ ಇರೋಲ್ಲ
ಚಿಕ್ಕಮಗಳೂರು, ಡಿಸೆಂಬರ್ 07; "ದೇಶದ ಸಂಪತ್ತಲ್ಲಿ ಮುಸ್ಲಿಮರಿಗೆ ಪಾಲಿದೆ" ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕ ಸಿ. ಟಿ. ರವಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ನಾವೇ ಬೇರೆ, ನೀವೇ ಬೇರೆ ಅಂತ ಹೇಳಿ ಪಾಕಿಸ್ತಾನ ನಿರ್ಮಾಣ ಮಾಡಿಕೊಂಡರು. ಗಾಂಧಿ ಉಪವಾಸ ಸತ್ಯಾಗ್ರಹ ಕೂತು ಒಪ್ಪಂದದ ಪ್ರಕಾರ 55 ಕೋಟಿ ದುಡ್ಡು ಕೊಡಿಸಿದರು. ಅವರಿಗೆ ಕೊಡುವುದೆಲ್ಲ ಕೊಟ್ಟಾಗಿದೆ" ಎಂದರು.

"ಈ ಮಾನಸೀಕತೆಯೇ ದೇಶ ವಿಭಜನೆಗೆ ಕಾರಣವಾಯಿತು. ಈ ಓಲೈಕೆ ಮತ್ತಷ್ಟು ಪಾಕಿಸ್ತಾನಗಳನ್ನು ದೇಶದೊಳಗೆ ಸೃಷ್ಟಿ ಮಾಡುತ್ತದೆ. ಅವರಿಗೆ 10 ಸಾವಿರ ಕೋಟಿಯಾದರೆ ಹಿಂದೂಗಳಿಗೆ ಎಷ್ಟು ಇಡುತ್ತೀರಿ?. ಹಿಂದೂಗಳ ಅಭಿವೃದ್ಧಿಗೆ 80 ಸಾವಿರ ಕೋಟಿ ಇಡಬೇಕಲ್ಲವೇ?. ಮುಸ್ಲಿಂ ಅಭಿವೃದ್ಧಿಗೆ ಅಂದರೆ ನೀವು ಬರೀ ಮುಸ್ಲಿಮರಿಗೆ ಮುಖ್ಯಮಂತ್ರಿಯಾ?" ಎಂದು ಪ್ರಶ್ನೆ ಮಾಡಿದರು.
"ಈ ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮಾತ್ರ ಅಧಿಕಾರವಿರೋದಾ?. ಸಿದ್ದರಾಮಯ್ಯನವರು ಪ್ರಧಾನಿ ಮೋದಿಯಿಂದ ಕಲಿಬೇಕಾದ ಅವಶ್ಯಕತೆ ಇದೆ. ಮೋದಿ ನಿಮ್ಮಂತೆ ಜಾತಿ-ಕೋಮಿಗೆ ಹಣ ಕೊಡುತ್ತೀನಿ ಅಂತ ಹೇಳಿಲ್ಲ. ನಮ್ಮ ಯಾವ ಯೋಜನೆಯಲ್ಲೂ ನಾವು ಜಾತಿ ಕೇಳಿಲ್ಲ. ಜಾತಿ ಕೇಳದಿರೋ ನಾವು ಕೋಮುವಾದಿಗಳು. ಎಲ್ಲರದಲ್ಲೂ ಜಾತಿ ಹುಡುಕೋ ಸಿದ್ದರಾಮಯ್ಯನವರು ಜಾತ್ಯಾತೀತರು" ಎಂದು ಟೀಕಿಸಿದರು.
"ಭಾರತೀಯನಿಗೆ ಈ ದೇಶದ ಸಂಪತ್ತಿನ ಮೇಲೆ ಅಧಿಕಾರವಿದೆ. ಮುಸ್ಲಿಮರ ಮಾನಸೀಕತೆಯಲ್ಲಿ ಪಾಲು ಕೇಳೋಕೆ ಬಂದರೆ ಬಡ್ಡಿ ಸಮೇತ ಕೊಟ್ಟಾಗಿದೆ ಇನ್ನೇನಿದ್ದರೂ ವಸೂಲಿ ಅಷ್ಟೇ ಬಾಕಿ ಇರುವುದು" ಎಂದು ಸಿ. ಟಿ. ರವಿ ಹೇಳಿದರು.
ದೇಶದ್ರೋಹಕ್ಕಾಗಿಯೇ ಬದುಕುವ ಜನರು; ಐಸಿಸ್ ಬೆಂಬಲಿಗನ ಜೊತೆ ಸಿದ್ದರಾಮಯ್ಯ ಕಾರ್ಯಕ್ರಮದ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, 'ಸಿದ್ದರಾಮಯ್ಯನವರೇ ಎಲ್ಲರೂ ನಿಮ್ಮಹಾಗೆ, ನಮ್ಮಹಾಗೆ ಇರುತ್ತಾರೆ ಎಂದು ಕೊಳ್ಳಬೇಡಿ. ದೇಶದ್ರೋಹಕ್ಕಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟ ಜನರಿದ್ದಾರೆ" ಎಂದರು.
"ಅಂತವರನ್ನು ರಾಜಕೀಯ ಲಾಭಕ್ಕೆ ಬೆಳೆಸಿದರೆ ದೇಶಕ್ಕೆ ಅಪಾಯ. ಐಸಿಸ್ ನಂಟಿರೋರು ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಇದ್ದರೆ, ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಇದ್ದರೆ ದೇಶಕ್ಕೆ ದೊಡ್ಡ ಅಪಾಯ. ಯತ್ನಾಳ್ ಹೇಳಿಕೆ ಹಿನ್ನೆಲೆ ಸಮಗ್ರ ತನಿಖೆಯಾಗಬೇಕು ಸಿಬಿಐ, ಎನ್‌ಐಎ ನಂತಹ ತನಿಖೆ ಆಗುವುದು ಸೂಕ್ತ" ಎಂದು ತಿಳಿಸಿದರು.
ಗೂಳಿಹಟ್ಟಿ ಶೇಖರ್ ಹೇಳಿಕೆಗೆ ಸಿ. ಟಿ. ರವಿ ಪ್ರತಿಕ್ರಿಯೆ ನೀಡಿ, "ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿದರೆ ಏಳು ಜನ್ಮದ ಪಾಪ ಅಂಟುಂತ್ತದೆ. ಅವರು ಯಾವ ಕಾರಣಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ನಾನು 38 ವರ್ಷದಿಂದ ಸ್ವಯಂ ಸೇವಕ, ಯಾವತ್ತೂ, ಯಾರನ್ನೂ ಜಾತಿ ಕೇಳಿಲ್ಲ. ಅಲ್ಲಿ ಜಾತಿ ಕೇಳುವ ವ್ಯವಸ್ಥೆಯೂ ಇಲ್ಲ" ಎಂದರು.
"ನಾಗ್ಪುರದಲ್ಲಿ ತಿಂಗಳ ಕಾಲ ಇದ್ದೆ. ಅಲ್ಲಿ ನೋಂದಣಿ, ಜಾತಿ ಪದ್ದತಿಯೇ ಇಲ್ಲ. ಅವರು ಹೇಳಿಲ್ಲ ಅನ್ನಿಸುತ್ತೆ, ಹೇಳಿದ್ದರೆ ಕಪೋಲ ಕಲ್ಪಿತ ಜಗತ್ತಿನ ಬಗ್ಗೆ ಯಾರು ಬೇಕಾದರೂ, ಯಾವ ಮಾಧ್ಯಮ ಬೇಕಾದರೂ ಯಾವುದೇ ಸಂದರ್ಭದಲ್ಲಿಯೂ ರಿಯಾಲಿಟಿ ಚೆಕ್ ಮಾಡಲಿ. ಹಿಂದೂಗಳ ಏಕತೆಗೆ ಶ್ರಮಿಸುತ್ತಿರುವ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡಬಾರದು" ಎಂದು ತಿಳಿಸಿದರು.
"ಸಂಘದ ಶಿಬಿರಕ್ಕೆ ಬಂದು ಗಾಂಧೀಜಿ ಪ್ರಶಂಸೆ ಮಾಡಿದರು. ಅಂಬೇಡ್ಕರ್ ಬಂದು ನನ್ನ ಕಲ್ಪನೆ ಭಾರತವನ್ನು ಇಲ್ಲಿ ಕಂಡೆ ಎಂದಿದ್ದರು. ಅಪಪ್ರಚಾರ, ಅಪನಂಬಿಕೆ ಹುಟ್ಟುಹಾಕುವುದು ತಪ್ಪಾಗುತ್ತದೆ" ಎಂದರು.












Click it and Unblock the Notifications