ಮೂಡಿಗೆರೆಯಿಂದ ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಕೊಡಲೇಬೇಕು: ಕಾರ್ಯಕರ್ತರ ಆಗ್ರಹ
ಚಿಕ್ಕಮಗಳೂರು, ಮಾರ್ಚ್, 29: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಿಜೆಪಿ ವಲಯದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಲೇ ಇವೆ. ಮೂಡಿಗೆರೆ ಕ್ಷೇತ್ರದಿಂದ ಎಂ.ಪಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಒಂದು ಬಣ ಮುಂದಾಗಿದೆ. ಮತ್ತೊಂದೆಡೆ ಬಣ ಎಂ.ಪಿ.ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಉಳಿಸುವಂತೆ ಸಿ.ಟಿ.ರವಿಗೆ ಮನವಿ ಮಾಡಲಾಗಿದೆ.
ಮಂಗಳವಾರ ಎಂ.ಪಿ.ಕುಮಾರಸ್ವಾಮಿಯವರ ಬೆಂಬಲಿತ ಕಾರ್ಯಕರ್ತರು ಸಿ.ಟಿ.ರವಿಯವರ ನಿವಾಸಕ್ಕೆ ಆಗಮಿಸಿದ್ದು, ಮೂಡಿಗೆರೆ ಕ್ಷೇತ್ರದಿಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಮತ್ತು ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಪರ-ವಿರೋಧದ ಚರ್ಚೆ
ಎಂ.ಪಿ.ಕುಮಾರಸ್ವಾಮಿ ಅವರ ಪರ-ವಿರೋಧದ ಬಣಗಳ ಮುಸುಕಿನ ಗುದ್ದಾಟ ಗುಟ್ಟಾಗಿರದೇ ಸಾರ್ವಜನಿಕವಾಗಿ ಬಹಿರಂಗವಾಗಿದೆ. ಪರ-ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಟಿಕೆಟ್ ಸಂಬಂಧ ನಡೆಯುತ್ತಿರುವ ಈ ಬಣ ಗುದ್ದಾಟ ಬಿಜೆಪಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಬಿಜೆಪಿಯ ಹಿರಿಯ ನಾಯಕರು ಯಾವ ರೀತಿ ಪರಿಹಾರ ಹುಡುಕುತ್ತಾರೆಯೋ ಎನ್ನುವುದನ್ನು ಕಾದುನೋಡಬೇಕಿದೆ ಅಷ್ಟೇ.
ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಒತ್ತಾಯ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ಬಾರಿ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಸ್ವಪಕ್ಷದವರ ವಿರುದ್ಧವೇ ತಿರುಗಿಬಿದ್ದಾರೆ. ಇನ್ನು ಮತ್ತೊಂದೆಡೆ ಇದೇ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮೂಡಿಗೆರೆಯಿಂದ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಪಟ್ಟುಹಿಡಿದು ಕುಳಿತಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ಭೇಟಿ ನೀಡಿದ ಸಾವಿರಾರು ಕಾರ್ಯಕರ್ತರು, ಎಂ.ಪಿ.ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಆಗ್ರಹಿಸಿದ್ದರು.

ಇತ್ತೀಚೆಗಷ್ಟೇ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಟ್ಟು ಹೊಸಮುಖಗಳಿಗೆ ಟಿಕೆಟ್ ಕೊಡಿ ಎಂದು ನೂರಾರು ಕಾರ್ಯಕರ್ತರು ಮೂಡಿಗೆರೆಯ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಕಾರ್ಯಕರ್ತರ ಆಕ್ರೋಶ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿದ್ದರು.
ತಮ್ಮ ಕಾರ್ಯಕರ್ತರು ರಸ್ತೆ ಮಧ್ಯೆಯೇ ಅಡ್ಡ ಹಾಕಿ ಪ್ರತಿಭಟನೆ ನಡೆಸಿದ ಕಾರಣ ಬಿ.ಎಸ್. ಯಡಿಯೂರಪ್ಪ ಕೋಪಗೊಂಡು ರೋಡ್ ಶೋ ರದ್ದು ಮಾಡಿ ಹೆಲಿಪ್ಯಾಡ್‌ನತ್ತ ತೆರಳಿದ್ದರು. ಈ ವೇಳೆ ಸಿ.ಟಿ. ರವಿ ಮಾತನಾಡಿ, ಪಕ್ಷದ ಮರ್ಯಾದೆ ಕಳೆಯುತ್ತಿದ್ದೀರಾ? ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು ಎಂದು ಹೇಳುವ ಮೂಲಕ ರಾಷ್ಟ್ರಿಯ ಹೆದ್ದಾರಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ನಂತರವೂ ಕೂಡ ಕಾರ್ಯಕರ್ತರು ನಮಗೆ ಕುಮಾರಸ್ವಾಮಿ ಬೇಡವೇ ಬೇಡ ಎಂದು ಹೇಳುವ ಮೂಲಕ ಬಿ.ಎಸ್. ಯಡಿಯೂರಪ್ಪನವರು ಬರುವ ಮಾರ್ಗದಲ್ಲಿ ರಸ್ತೆ ಅಡ್ಡಗಟ್ಟಿ ಕೂಗಾಟ ನಡೆಸಿದ್ದರು. ಹೆದ್ದಾರಿಯಲ್ಲಿ 1000ಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸಿದ್ದು, ಹೊಸ ಮುಖಕ್ಕೆ ಟಿಕೆಟ್ ಕೊಡಿ ಎಂದು ಪಟ್ಟುಹಿಡಿದಿದ್ದರು. ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿಯನ್ನು ಪೊಲೀಸರು ಬೇರೆಡೆಗೆ ಕರೆದೊಯ್ದಿದ್ದರು.
ಇನ್ನು ಲಿಂಗಾಯತರ ಮತ ಬೇಡ ಎನ್ನುವ ಹೇಳಿಕೆ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿತ್ತು. ಇದನ್ನು ಸಿ.ಟಿ.ರವಿ ಹೇಳಿದ್ದಾರೆ ಎಂದು ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆ ರೀತಿ ಯಾರೂ ಹೇಳಿಕೆ ಕೊಡಬಾರದು, ಅದು ತಪ್ಪು. ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಸಮಾಧಾನ ಮಾಡಿದರು.












Click it and Unblock the Notifications