ಚಿಕ್ಕಮಗಳೂರಿನಲ್ಲಿ ಸೀರೆ ಹಂಚುತ್ತಿದ್ದ ಸಿ.ಟಿ.ರವಿ ಬೆಂಬಲಿಗರಿಗೆ ಹಿಗ್ಗಮುಗ್ಗಾ ಕ್ಲಾಸ್ ತೆಗೆದುಕೊಂಡ ವ್ಯಕ್ತಿ, ವರದಿ ಇಲ್ಲಿದೆ
ಚುನಾವಣೆ ನೆಪದಲ್ಲಿ ಚಿಕ್ಕಮಗಳೂರಿನಲ್ಲಿ ಸೀರೆ ಹಂಚಿಕೆ ಮಾಡುತ್ತಿದ್ದ ಸಿ.ಟಿ. ರವಿ ಬೆಂಬಲಿಗರಿಗೆ ಮದ್ಯವ್ಯಸನಿಯೊಬ್ಬ ಹಿಗ್ಗಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾನೆ.
ಚಿಕ್ಕಮಗಳೂರು, ಮಾರ್ಚ್, 08: ಚುನಾವಣೆ ನೆಪದಲ್ಲಿ ಮುಂಬರುವ ಯುಗಾದಿ ಹಬ್ಬಕ್ಕೆ ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದರು. ಇದೇ ವಿಚಾರಕ್ಕೆ ಇದೀಗ ಸಿ.ಟಿ.ರವಿ ಬೆಂಬಲಿಗರಿಗೆ ಮತದಾರರು ಮೈಚಳಿ ಬಿಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.
ಕಳೆದ ರಾತ್ರಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ. ಈ ವೇಳೆ ಮನೆಗೆ ಬಂದ ಮದ್ಯವ್ಯಸನಿಯೊಬ್ಬ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಸ್ತೆ ಮಧ್ಯೆ ಸೀರೆಯನ್ನು ಸುಟ್ಟು ಬಿಜೆಪಿ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾನೆ.

ಒಂದು ಕೆ.ಜಿ. ಅಕ್ಕಿಯನ್ನೂ ಸಹ ಕೊಟ್ಟಿಲ್ಲ
ಕೊರೊನಾ ಸಂದರ್ಭದಲ್ಲಿ ಒಂದು ಕೆ.ಜಿ. ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ ಅಂತಾ ಸೀರೆ ಹಂಚಲು ಬಂದಿದ್ಧೀರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸೂಕ್ತವಾದ ಮೂಲಭೂತ ಸೌಲಭ್ಯ ಬೇಕು ಎಂದು ನಶೆಯಲ್ಲಿ ಬಿಜೆಪಿಗರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೆಯೇ ಎರಡ್ಮೂರು ಸೀರೆಗಳನ್ನು ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾನೆ. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ಆಕ್ರೋಶ
ಬಿಜೆಪಿಯವರು ಚುನಾವಣೆಗಳಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿಲ್ಲ. ಮತ್ತು ಸುಳ್ಳುಗಳಿಂದಲೇ ಸೌಧವನ್ನು ಕಟ್ಟುದ್ದಾರೆ. ಈ ಮೂಲಕ ಅವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕೈಮರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 4 ವರ್ಷ ಆಡಳಿತ ನಡೆಸಿರುವ ಬಿಜೆಪಿ ನೇತೃತ್ವದ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅದೇ ರೀತಿಯಲ್ಲಿ 9 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯೂ ಸಾಮಾನ್ಯ ಜನರು, ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದ್ದರು.












Click it and Unblock the Notifications