ರಸ್ತೆ ಗುಂಡಿ ಮುಚ್ಚಿಸಿದ್ದಕ್ಕೆ ಬ್ಯಾನರ್; ಸ್ಪಷ್ಟನೆ ಕೊಟ್ಟ ಕಾಂಗ್ರೆಸ್ ಶಾಸಕ
ಚಿಕ್ಕಮಗಳೂರು, ಡಿಸೆಂಬರ್ 21: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ ಟಿ. ಡಿ. ರಾಜೇಗೌಡ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಕೊಪ್ಪದಲ್ಲಿ ರಸ್ತೆ ಗುಂಡಿ ಮುಚ್ಚಿದ ಬಳಿಕ ಹಾಕಲಾದ ಬ್ಯಾನರ್ ಬಗ್ಗೆ ಅವರು ಮಾತನಾಡಿದ್ದಾರೆ. 2018 ಮತ್ತು 2023ರ ಚುನಾವಣೆಯಲ್ಲಿ ಅವರು ಶೃಂಗೇರಿಯಿಂದ ಗೆಲುವು ಸಾಧಿಸಿದ್ದಾರೆ.
ಅಭಿವೃದ್ಧಿಯೇ ಮೂಲಮಂತ್ರ. ಕೊಪ್ಪ ಪಟ್ಟಣದ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಶಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಶಾಸಕ ಟಿ. ಡಿ. ರಾಜೇಗೌಡರ ಫೋಟೋ ಇರುವ ಬ್ಯಾನರ್ ಹಾಕಲಾಗಿತ್ತು.

ಮೇಲಿನಪೇಟೆ ಬಾಯ್ಸ್ ಹಾಗೂ ಸಮಸ್ತ ನಾಗರೀಕರು ಕೊಪ್ಪ ಪಟ್ಟಣ ಇವರ ಹೆಸರಿನಲ್ಲಿ ಈ ಬ್ಯಾನರ್ ಹಾಕಲಾಗಿತ್ತು. ಬ್ಯಾನರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಫೋಟೋ ಸಹ ಇತ್ತು.
ಬ್ಯಾನರ್ ಕಂಡು ನಕ್ಕಿದ್ದ ಜನರು; ಶಾಸಕರ ಬ್ಯಾನರ್ ಪ್ರೇಮ ಕಂಡು ಜನರು ನಕ್ಕಿದ್ದರು. ರಸ್ತೆಗುಂಡಿಯನ್ನು ಮುಚ್ಚಿರುವುದು ಮಹಾ ಸಾಧನೆ ಎಂಬಂತೆ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಬ್ಯಾನರ್ ಹಾಕಿಸಿಕೊಂಡು ಪ್ರಚಾರಕ್ಕೆ ಹೊಸ ಭಾಷ್ಯ ಬರೆದಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
ಹೊಸ ರಸ್ತೆ ಮಾಡಿಸಿ ಬ್ಯಾನರ್ ಹಾಕಿಸಿಕೊಂಡಿದ್ದರೆ ಅದು ಬೇರೆ ಮಾತು. ರಸ್ತೆಗೆ ಬಿದ್ದ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಳ್ಳುವುದು ಯಾವ ಪ್ರಚಾರ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದರು.
ರಸ್ತೆ ಗುಂಡಿ ಮುಚ್ಚಿಸಿ ಬ್ಯಾನರ್ ಹಾಕಿಸಿಕೊಂಡಿರುವ ಶಾಸಕರು 6 ವರ್ಷದಿಂದ ಕೊಪ್ಪ ಪಟ್ಟಣ ಪಂಚಾಯಿತಿಗೆ 1 ರೂಪಾಯಿ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದ ಜನರು ಬ್ಯಾನರ್ ಕಂಡು ನಕ್ಕಿದ್ದರು.
ಶಾಸಕರ ಸ್ಪಷ್ಟನೆ; ಬ್ಯಾನರ್ ಎಲ್ಲಾ ಕಡೆ ವೈರಲ್ ಆಗುತ್ತಿದ್ದಂತೆಯೇ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಜನರು ತಮ್ಮ ಮೇಲಿನ ಅಭಿಮಾನಕ್ಕಾಗಿ ಬ್ಯಾನರ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಸಹಜ, ಅವುಗಳಿಗೆ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ಶಾಸಕರು ತಮ್ಮ ಸ್ಪಷ್ಟನೆಯಲ್ಲಿ ಕೊಪ್ಪ ಪಟ್ಟಣದಲ್ಲಿ ರಸ್ತೆ ಸಾಕಷ್ಟು ಹದಗೆಟ್ಟಿತ್ತು. ಜನರಿಗೆ ಅನುಕೂಲವಾಗಲಿ ಎಂದು ಪಟ್ಟಣ ಪಂಚಾಯಿತಿ ತನ್ನ ಅನುದಾನದಿಂದ ರಸ್ತೆ ರಿಪೇರಿ ಮಾಡಿಸಿದೆ. ರಸ್ತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ.
ರಸ್ತೆ ಗುಂಡಿ ಬಗ್ಗೆ ಜನರು ಪಟ್ಟಣ ಪಂಚಾಯತಿಗೆ ಹಲವು ಬಾರಿ ಹೇಳಿದರೂ ಯಾವುದೇ ಕೆಲಸ ಆಗಿರಲಿಲ್ಲ. ಜನರು ಈ ವಿಚಾರ ನನ್ನ ಗಮನಕ್ಕೆ ತಂದರು, ಈ ಕುರಿತು ಪಟ್ಟಣ ಪಂಚಾಯಿತಿಗೆ ಹೇಳಿ ಅವರ ಮೂಲಕವೇ ಒಂದು ವಾರದಲ್ಲಿ ರಸ್ತೆ ಸರಿಪಡಿಸುವ ಕೆಲಸ ಮಾಡಿದ್ದೇನೆ. ಆದ್ದರಿಂದ ಜನರು ಬ್ಯಾನರ್ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಸಕರ ಬ್ಯಾನರ್ ನೋಡಿದ್ದ ಜನರು ಕೊಪ್ಪ ಪಟ್ಟಣ ಪಂಚಾಯತಿ ತನ್ನ ಅನುದಾನದಲ್ಲಿ ರಸ್ತೆಗುಂಡಿಯನ್ನು ಮುಚ್ಚಿಸಿದೆ. ಶಾಸಕರು ಅನುದಾನವನ್ನು ಕೊಡಿಸಿಲ್ಲ. ಆದರೆ ಬ್ಯಾನರ್ ಹಾಕಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದ್ದರು.
ಕೊಪ್ಪ ಪಟ್ಟಣ ಪಂಚಾಯತಿ ತನ್ನ ಅನುದಾನದಿಂದ ರಸ್ತೆ ದುರಸ್ತಿ ಮಾಡಿಸಿತ್ತು. ಟಿ. ಡಿ. ರಾಜೇಗೌಡರು 2018ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ರಸ್ತೆ ದುರಸ್ತಿ ಮಾಡಿಸಿದ್ದರು. ಆದರೆ ಗುತ್ತಿಗೆದಾರನಿಗೆ ಯಾವುದೇ ಬಿಲ್ ಪಾವತಿಸಿರಲಿಲ್ಲ.
2023ರಲ್ಲಿ ಪಟ್ಟಣ ಪಂಚಾಯತಿ ಬಿಲ್ ಪಾವತಿ ಮಾಡಿತ್ತು. ಬಳಿಕ ಎರಡು ಮೂರು ಬಾರಿ ರಸ್ತೆ ದುರಸ್ತಿ ಕಾರ್ಯ ಮಾಡಿಸಲಾಗಿದೆ. ಶಾಸಕರ ನಿಧಿಯಿಂದ ಇದುವರೆಗೂ ಹಣ ಕೊಟ್ಟಿಲ್ಲ ಎಂದು ಜನರು ಹೇಳಿದ್ದಾರೆ.












Click it and Unblock the Notifications