ಸಿ.ಟಿ ರವಿ ದೊಡ್ಡವರ ಬಗ್ಗೆ ಮಾತನಾಡಿದರೆ, ದೊಡ್ಡವನಾಗುತ್ತೇನೆಂಬ ಭ್ರಮೆಯಲ್ಲಿದ್ದಾರೆ-ರೇಖಾ ಹುಲಿಯಪ್ಪಗೌಡ
ಚಿಕ್ಕಮಗಳೂರು, ಡಿಸೆಂಬರ್ 20: ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಹೆಸರಿಡುವ ಬದಲು ಚಿಕ್ಕಮಗಳೂರು ನಗರದ ಬಡಾವಣೆಗಳಿಗೆ ಮೊದಲು ಹೆಸರಿಡಲು ಮುಂದಾಗಲಿ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಶಾಸಕ ಸಿ.ಟಿ.ರವಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೊಡ್ಡ ನಾಯಕರ ಬಗ್ಗೆ ಮಾತನಾಡಿದರೆ, ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಸಿ.ಟಿ.ರವಿ ಇದ್ದಾರೆ. ಅವರು ವಾಕ್ ಚಾತುರ್ಯದಿಂದ ರಾಜಕೀಯವಾಗಿ ದೊಡ್ಡಮಟ್ಟಕ್ಕೆ ಬೆಳೆದಿದ್ದಾರೆ. ಅವರ ಮಾತಿನಿಂದಲೇ ರಾಜಕೀಯವಾಗಿ ಅಧೋಗತಿ ಕಾಣುವ ದಿನಗಳು ಬರಲಿದೆ. ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು.

ಸಿ.ಟಿ ರವಿ ಬಡಾವಣೆಗಳಿಗೆ ಹೆಸರಿಡಲಿ
ವಿವಿಧ ಪಕ್ಷಗಳ ದೊಡ್ಡ ನಾಯಕರ ವಿರುದ್ಧ ಶಾಸಕ ಸಿ.ಟಿ.ರವಿ ನಾಲಿಗೆ ಹರಿಬಿಟ್ಟರೆ, ಮುಂದಿನ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸುತ್ತಾರೆ. ಚಿಕ್ಕಮಗಳೂರು ನಗರದ ವಿವಿಧ ಬಡಾವಣೆಗಳ ಅಡ್ಡ ರಸ್ತೆಗಳಿಗೆ ಯಾವುದೇ ಹೆಸರಿಲ್ಲ. ವಿಳಾಸಕ್ಕೆ ಹುಡುಕಾಡುವ ಪರಿಸ್ಥಿತಿ ಇದೆ. ನಗರಸಭೆ ರಸ್ತೆ ಕಾಮಗಾರಿ ಕ್ರಿಯಾ ಯೋಜನೆಯಲ್ಲಿ ಇಂತವರ ಮನೆಯಿಂದ ಆರಂಭಗೊಂಡು ಇವರ ಮನಗೆ ಮುಕ್ತಾಯಗೊಳ್ಳುತ್ತದೆ ಎಂದು ನಮೂದಿಸಲಾಗುತ್ತಿದೆ. ದೊಡ್ಡ ನಾಯಕರಿಗೆ ಹೆಸರಿಡುವ ಬದಲಿಗೆ ಸಿ.ಟಿ ರವಿ ಬಡಾವಣೆಗೆ ಮೊದಲು ಹೆಸರಿಡಲಿ ಎಂದು ಆಗ್ರಹಿಸಿದರು.

ಶಾಸಕರು ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ
ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿಲ್ಲ. ಎಲ್ಲಾ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಂಜಿನಿಯರಿಂಗ್ ಕಾಲೇಜು ಎಲ್ಲಿದೆ ಎಂದು ಹುಡುಕಬೇಕಿದೆ. ಬಸವನಹಳ್ಳಿ ಕರೆ ಅಭಿವೃದ್ದಿಗೆ ಕೋಟ್ಯಾಂತರ ರೂಪಾಯಿ ಅನುದಾನ ಮಂಜೂರು ಮಾಡಿದರೂ ಕಾಮಗಾರಿ ಮುಗಿದಿಲ್ಲ. ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ಪೂರ್ಣಗೊಳ್ಳಲಿಲ್ಲ. ಕ್ಷೇತ್ರದ ಅಭಿವೃದ್ಧಿ ಕುರಿತು ಶಾಸಕರು ಶ್ವೇತಪತ್ರ ಹೊರಡಿಸಿ ಚರ್ಚೆಗೆ ಬರಲಿ ಎಂದು ರೇಖಾ ಹುಲಿಯಪ್ಪಗೌಡ ಸವಾಲು ಹಾಕಿದರು.

ಸಿ.ಟಿ ರವಿ ಖಾಲಿ ಡಬ್ಬದಂತೆ ಶಬ್ಧ ಮಾಡುತ್ತಿದ್ದಾರೆ
ಸಿ.ಟಿ ರವಿ ನಾಲ್ಕು ಬಾರಿ ಶಾಸಕರಾದರೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಜನರ ವಿಶ್ವಾಸ ಗಳಿಸಿಲ್ಲ. ಖಾಲಿ ಡಬ್ಬದಂತೆ ಶಬ್ಧ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ನಗರದ ರಸ್ತೆಗಳು ಹೊಂಡ, ಗುಂಡಿಗಳಿಂದ ಕೂಡಿದೆ. ನಾಯಕರಿಗೆ ಹೆಸರಿಡುವ ಬದಲು ಮೊದಲು ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲಿ ಎಂದು ತಿಳಿಸಿದರು.

ವ್ಯಕ್ತಿಗಿಂತ ಪಕ್ಷದ ಗೆಲವು ಮುಖ್ಯ
ಮಾತು ಮುಂದುವರಿಸಿದ ಅವರು, ವಿಧಾನಸಭೆ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ 7ಜನ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿ ಸಿದ್ದು, ನನಗೆ ಟಿಕೆಟ್ ನೀಡುವ ಭರವಸೆ ಇದೆ. ಒಂದು ವೇಳೆ ಪಕ್ಷ ಟಿಕೆಟ್ ನೀಡದಿದ್ದರೆ, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಅವರ ಪರ ಕೆಲಸ ಮಾಡುತ್ತೇವೆ. ಯಾವುದೇ ವ್ಯಕ್ತಿಗೆ ಟಿಕೆಟ್ ಸಿಕ್ಕರೂ ಉಳಿದವರು ಪಕ್ಷದ ಪರವಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ವ್ಯಕ್ತಿಗಿಂತ ಪಕ್ಷದ ಗೆಲವು ಮುಖ್ಯ ಎಂದು ರೇಖಾ ಹುಲಿಯಪ್ಪಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿಳ್ಳೇಕಲ್ಲಹಳ್ಳಿಯ ಪುಟ್ಟೇಗೌಡ ಹಾಗೂ ಸಿದ್ದೇಶ ಉಪಸ್ಥಿತರಿದ್ದರು.












Click it and Unblock the Notifications