ಪ್ರಕೃತಿಯ ನಡುವೆ ತೇಜಸ್ವಿ ಓದಿನ ಗಾಜಿನ ಮನೆ, ಒಳಗೆ ಹೋದರೆ ಸಾಕು ಹೊರಬರಲು ಮನಸಾಗೋದೇ ಇಲ್ಲ, ಏನೆಲ್ಲ ಸೌಲಭ್ಯಗಳಿವೆ ಗೊತ್ತಾ?
ಬಣಕಲ್, ಸೆಪ್ಟೆಂಬರ್, 07: ಕಣ್ಣು ಹಾಯಿಸಿದಷ್ಟು ದೂರವೂ ಹಬ್ಬಿರುವ ಪ್ರಕೃತಿ, ಹಕ್ಕಿಗಳ ಕಲರವ, ಸುತ್ತ ಹೂ ಗಿಡ ಬಳ್ಳಿಗಳ ಮನಮೋಹಕ ದೃಶ್ಯ, ಈ ಅಪೂರ್ವ ದೃಶ್ಯಗಳನ್ನು ನೋಡುತ್ತಾ ಗಾಜಿನ ಮನೆಯಲ್ಲಿ ಕುಳಿತು ಪುಸ್ತಕ ಓದುವ ಅನುಭವ ಮಾತ್ರ ಎಂದಿಗೂ ಮರೆಯಲಾಗದಂತಹದ್ದು. ಅಂತಹ ಅನುಭವಕ್ಕೆ ಸಜ್ಜಾಗಿ ಓದುಗರಿಗೆ ಮುಕ್ತವಾಗಿದೆ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಓದಿನ ಗಾಜಿನ ಮನೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಪ್ರತಿಷ್ಠಾನಕ್ಕೆ ಬರುವ ತೇಜಸ್ವಿ ಅವರ ಓದುಗರಿಗಾಗಿ ಪ್ರಶಾಂತವಾದ ಪರಿಸರದಲ್ಲಿ ಕೆಲಕಾಲ ಕುಳಿತು ಓದುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಓದಿನ ಗಾಜಿನ ಕೊಠಡಿಯನ್ನು ನಿರ್ಮಾಣ ಮಾಡಿದ್ದು, ತೇಜಸ್ವಿ ಅವರ ಎಲ್ಲಾ ಪುಸ್ತಕಗಳನ್ನು ಇಲ್ಲಿ ಓದಬಹುದಾಗಿದೆ. ಯಾವ ಗಲಾಟೆ, ಗದ್ದಲಗಳೂ ಇಲ್ಲದೇ ಸುತ್ತ ಗಾಜಿನ ಗೋಡೆಗಳಾಚೆ ಕಾಣುವ ಹಸಿರು ಸೌಂದರ್ಯವನ್ನು ಆಸ್ವಾಧಿಸುತ್ತಾ ಹಕ್ಕಿಗಳ ಚಿಲಿಪಿಲಿಗಳನ್ನು ಕಲರವಗಳನ್ನು ಕೇಳುತ್ತಾ ತೇಜಸ್ವಿ ಅವರ ಕೃತಿಗಳನ್ನು ಓದಬಹುದಾಗಿದೆ. ಪುಸ್ತಕ ಓದಿನ ಜೊತೆಗೆ ಹಬೆಯಾಡುವ ಬಿಸಿಯಾದ ಕಾಫಿಯೂ ಇಲ್ಲಿ ಸಿಗಲಿದೆ.

ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಇಂದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ 85ನೇ ಜನ್ಮದಿನದ ಅಂಗವಾಗಿ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರಾದ ಡಾ.ಸಬಿತಾ ಬನ್ನಾಡಿ ಅವರು ತೇಜಸ್ವಿ ಅವರು ತೋರಿದ ಲೋಕದೃಷ್ಟಿ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರತಿಷ್ಠಾನದ ಪದಾಧಿಕಾರಿಗಳು, ತೇಜಸ್ವಿ ಒಡನಾಡಿಗಳು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 9ಕ್ಕೆ ಅಣ್ಣನ ನೆನಪು ನಾಟಕ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸೆಪ್ಟೆಂಬರ್ 9ರಂದು ಸಂಜೆ 6 ಗಂಟೆಗೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ತೇಜಸ್ವಿ ಅವರ ಕೃತಿ ಆಧಾರಿತ ಅಣ್ಣನ ನೆನಪು ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಅವರದಾಗಿದ್ದು, ಸಂಗೀತವನ್ನು ಅಕ್ಷಯ್ ಭೊಂಸ್ಲೆ ನೀಡಿದ್ದಾರೆ. ಹನು ರಾಮಸಂಜೀವ ಅವರ ವಿನ್ಯಾಸ ಮತ್ಯು ನಿರ್ದೇಶನದ ಈ ನಾಟಕದ ಪ್ರವೇಶ ಉಚಿತವಿದೆ.
"ತೇಜಸ್ವಿ ಪ್ರತಿಷ್ಠಾನಕ್ಕೆ ಬರುವ ಅವರ ಅಭಿಮಾನಿಗಳು, ಓದುಗರಿಗೆ ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಓದಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಓದಿನ ಕೊಠಡಿಯನ್ನು ನಿರ್ಮಿಸಲಾಗಿದೆ. ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ಸಾಕಾರಗೊಳಿಸಲು ತೇಜಸ್ವಿ ಪ್ರತಿಷ್ಠಾನ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ" ಎಂದು ತೇಜಸ್ವಿ ಪ್ರತಿಷ್ಠಾನ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ಹೇಳಿದರು.












Click it and Unblock the Notifications