ಚಿಕ್ಕಮಗಳೂರು: ಠಾಣೆಯಲ್ಲೇ ವ್ಯಕ್ತಿಯೊಬ್ಬರಿಗೆ ಬೂಟುಗಾಲಲ್ಲಿ ಒದೆ; ಪಿಎಸ್ಐ ವಿರುದ್ಧ ಆರೋಪ!
ಚಿಕ್ಕಮಗಳೂರು, ಮಾರ್ಚ್ 8: ಪೊಲೀಸರ ಮೇಲೆ ಆಗಾಗ ಹಲ್ಲೆ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಕಾಫಿನಾಡು ಚಿಕ್ಕಮಗಳೂರಿನ ಪಿಎಸ್ಐ ಒಬ್ಬರ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, "ಪೊಲೀಸ್ ಠಾಣೆಯಲ್ಲೇ ನನ್ನನ್ನು ನೆಲಕ್ಕುರುಳಿಸಿ ಮುಖಕ್ಕೆ ಬೂಟು ಕಾಲಿನಲ್ಲಿ ಮನಬಂದಂತೆ ಒದ್ದಿದ್ದಾರೆಂದು,'' ಗಾಯಾಳು ವ್ಯಕ್ತಿಯೊಬ್ಬರು ಚಿಕ್ಕಮಗಳೂರು ಗ್ರಾಮಾಂತರ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವ ಚಿಕ್ಕಮಗಳೂರು ತಾಲೂಕಿನ ದೇವರಹಳ್ಳಿ ನಿವಾಸಿ ಸುರೇಶ್ ಎಂಬುವವರು ಈ ರೀತಿ ಆರೋಪ ಮಾಡಿದ್ದಾರೆ. ಶಾಲೆಯೊಂದರ ಇಂಟರ್‌ಲಾಕ್ ಕೆಲಸ ಮಾಡಿಸುತ್ತಿದ್ದ ಸುರೇಶ್, ಕೆಲಸದ ಬಗ್ಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಸುರೇಶ್ ನಡುವೆ ಮಾತಿನ ಚಕಮಕಿ ನಡೆದು, ಸುರೇಶ್ ವಿರುದ್ಧ ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಕುರಿತು ಪೊಲೀಸ್ ಠಾಣೆಯಿಂದ ಕರೆ ಬಂದ ಹಿನ್ನೆಲೆ ಸುರೇಶ್ ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಪಿಎಸ್ಐ ಅನಿಲ್ ನಾಯಕ್ ಎಂಬುವವರು ಇವರ ಮೇಲೆ ಠಾಣೆಯಲ್ಲಿ ಮನಸೋ ಇಚ್ಛೆ ಹಲ್ಲೆ ಮಾಡಿರುವುದಾಗಿ ಸುರೇಶ್ ಆರೋಪಿಸಿದ್ದಾರೆ. ಸುರೇಶ್ ಎಡಗಣ್ಣಿಗೆ ಗಂಭೀರವಾದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗಾಯಾಳು ಸುರೇಶ್, "ಠಾಣೆಯಲ್ಲಿ ಪ್ರಕರಣ ಮುಗಿಸಿಕೊಂಡು ಹೋಗುವಾಗ ಪಿಎಸ್ಐ ಅನಿಲ್ ನಾಯಕ್ ನನ್ನನ್ನು ಒಳಗೆ ಕರೆಸಿ ಏಕವಚನದಲ್ಲಿ ಬೈದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನಾನು ಕುಳಿತಿರುವ ಚೇರಿಗೆ ಒದ್ದರು. ಆಗ ನಾನು ಕೆಳಗೆ ಬಿದ್ದೆ. ಬಿದ್ದಾಗ ನನ್ನ ಮುಖ ಹಾಗೂ ಕಣ್ಣಿನ ಮೇಲೆ ಬೂಟ್ ಕಾಲಿನಿಂದ ಒದ್ದು ಹಲ್ಲೆ ಮಾಡಿದರು,'' ಎಂದು ಆರೋಪ ಮಾಡಿದ್ದಾರೆ.
"ಈ ಎಲ್ಲ ಘಟನೆ ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಸಾಕ್ಷಿ ಪೊಲೀಸ್ ಠಾಣೆಯಲ್ಲೇ ಇದ್ದು, ಎಸ್ಪಿ ಸಾಹೇಬರು ಇದನ್ನು ಪರಿಶೀಲಿಸಿ ನನಗೆ ನ್ಯಾಯ ಕೊಡಿಸುತ್ತಾರೆ,'' ಅನ್ನುವ ವಿಶ್ವಾಸವನ್ನು ಸುರೇಶ್ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಷ್ಟು ಹೀನಾಯವಾಗಿ ನನ್ನನ್ನು ನಡೆಸಿಕೊಳ್ಳುವುದು ಏನಿತ್ತು ಅಂತ ಸುರೇಶ್ ಅಳಲು ತೋಡಿಕೊಂಡಿದ್ದಾರೆ. ನಾನೊಬ್ಬ ಜನಪ್ರತಿನಿಧಿ ನನಗೆ ಹೀಗಾದರೆ, ಜನಸಾಮಾನ್ಯರ ಗತಿ ಏನು? ನನಗೆ ನೋವಾಗಿದೆ, ನ್ಯಾಯ ಬೇಕು," ಎಂದು ಹಲ್ಲೆಗೊಳಗಾದ ಸುರೇಶ್ ಆಗ್ರಹಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಸುರೇಶ್ ಇದೀಗ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನ್ಯಾಯ ಕೊಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
"ಪಿಎಸ್‌ಐಗೆ ತಕ್ಕ ಶಿಕ್ಷೆಯಾಗಬೇಕು, ನನಗೆ ಅವಮಾನ ಆಗಿದೆ, ಕಣ್ಣೀರು ಹಾಕುವಂತಹ ಪರಿಸ್ಥಿತಿ ಪಿಎಸ್ಐ ನಿರ್ಮಿಸಿದ್ದಾರೆ, ಏಕಾಏಕಿ ಹಲ್ಲೆ ಮಾಡಿದ್ದರಿಂದ ನನ್ನ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಇವರಿಗೆ ಯಾರು ಬೂಟಿನಲ್ಲಿ ಹೊಡಿಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು? ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇದನ್ನು ಸಾಕ್ಷಿಯಾಗಿಟ್ಟುಕೊಂಡು ಪಿಎಸ್ಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು,'' ಸುರೇಶ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಕುರಿತು ಸೂಕ್ತ ತನಿಖೆ ನಡೆಯಬೇಕಿದೆ.












Click it and Unblock the Notifications