ಮಲ್ಲಂದೂರು ಪೊಲೀಸ್ ಠಾಣೆಗೆ ಹೊಸ ರೂಪ ನೀಡಿದ ಪಿಎಸ್‌ಐ, ಗಮನ ಸೆಳದ ಜಾಗೃತಿ ಮೂಡಿಸುವ ಚಿತ್ರಗಳು
ಚಿಕ್ಕಮಗಳೂರು, ಜನವರಿ, 16: ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ಬಣ್ಣ-ಬಣ್ಣದ ಚಿತ್ರ, ಗೋಡೆಬರಹಗಳಿಂದ ಜಗಮಗಿಸುತ್ತಿದ್ದು, ಸ್ಥಳೀಯರ ಗಮನ ಸೆಳೆದಿದೆ.
ಸಬ್ ಇನ್ಸ್‌ಪೆಕ್ಟರ್ ರವೀಶ್ ಇಲ್ಲಿಗೆ ಬಂದ ಮೇಲೆ ಕೆಲಸ ಮಾಡುವ ಜಾಗದ ವಾತಾವರಣ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತೆ ಎಂದು ಗ್ರಾಮ ಪಂಚಾಯಿತಿ ಹಾಗೂ ಸ್ಥಳಿಯ ದಾನಿಗಳ ಸಹಕಾರದಿಂದ ಇಡೀ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಯಾರ ಬಳಿಯೂ ಒಂದು ರೂಪಾಯಿ ಪಡೆದುಕೊಂಡಿಲ್ಲ. ನೀವೇ ಬಂದು ನೋಡಿ. ಕೆಲಸ ಮಾಡಿಸಿಕೊಡಿ ಎಂದು ಅವರಿಂದಲೇ ಎಲ್ಲಾ ಕೆಲಸವನ್ನು ಮಾಡಿಸಿದ್ದಾರೆ. ಠಾಣೆಯ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ ಎಂಬ ಅನುಮಾನ ಹುಟ್ಟು ಹಾಕುತ್ತದೆ. ಅಷ್ಟರ ಮಟ್ಟಿಗೆ ಬದಲಿಸಿದ್ದಾರೆ. ಇವರ ಕೆಲಸಕ್ಕೆ ಸ್ಥಳಿಯರು ಕೈಜೋಡಿಸಿ ಸಾಥ್ ನೀಡಿದ್ದಾರೆ.
ಗೋಡೆಗಳ ಮೇಲೆ ಮೂಡಿದ ಜಾಗೃತಿಯ ಚಿತ್ರಗಳು
ಇನ್ನು ಪೊಲೀಸ್ ಠಾಣೆಯ ಕಾಂಪೌಂಡ್ ಹೊರಭಾಗದಲ್ಲಿ ಪೋಕ್ಸೋ, ಟ್ರಾಫಿಕ್ ರೂಲ್ಸ್, ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಜೂಜಾಟ, ಕಳ್ಳತನ, ಮಕ್ಕಳನ್ನು ಕೆಲಸಕ್ಕೆ ಬಳಸುವುದು ಬಾಲಾಪಾರಾದ ಸೇರಿದಂತೆ ಬಹುತೇಕ ಚಿತ್ರಗಳನ್ನು ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕಾಂಪೌಂಡ್ ಒಳಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ ತಡೆ, ಮರ ಕಡಿಯುವುದು ಮಾರಕ, ಕಾಡುಪ್ರಾಣಿಗಳ ರಕ್ಷಣೆ ಮಾಡುವಂತಹ ಚಿತ್ರಗಳನ್ನು ಬಿಡಿಸಿದ್ದಾರ. ಅಪರಾಧಿಗಳ ಮನಸ್ಸಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರಗಳ ಮೂಲಕ ತಪ್ಪು ಮಾಡಿದವರಿಗೆ ಮನವರಿಕೆ ಆಗುವಂತೆ ಮಾಡಿದ್ದಾರೆ. ಜೊತೆಗೆ, ಠಾಣೆಯ ಆವರಣದಲ್ಲಿ ಪಾರ್ಕ್ ಕೂಡ ನಿರ್ಮಾಣ ಮಾಡಿದ್ದಾರೆ.

ಠಾಣೆಯ ರೂಪವನ್ನೇ ಬದಲಿಸಿದ ಪಿಎಸ್‌ಐ
ಒಳಗಡೆ ಹೋದರೆ ಇದು ಪೊಲೀಸ್ ಠಾಣೆಯೇ ಅನ್ನಿಸುವುದಿಲ್ಲ. ಠಾಣೆ ಅಂದರೆ ಇರುವ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಿಸಿದ್ದಾರೆ. ಪಿ.ಎಸ್.ಐ. ತಾನು ಕೆಲಸ ಮಾಡುವ ಜಾಗ ಹೇಗೆ ಇರಬೇಕೆಂದು ಅವರ ಭಾವನೆ ಇದೆಯೋ ಸ್ಥಳಿಯರು ಹಾಗೂ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಅದೇ ರೀತಿ ಬದಲಿಸಿದ್ದಾರೆ. ಇನ್ನು ಠಾಣೆಯಲ್ಲಿ ಲೈಬ್ರರಿ ಮಾಡಬೇಕೆಂದು ಇವರ ಬಯಕೆಯಾಗಿದೆ. ಸ್ಥಳೀಯರು ಅದಕ್ಕೂ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಪಿಎಸ್‌ಐ ರವೀಶ್ ಅವರ ಈ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕೂಡ ಮೆಚ್ಚಿದ್ದಾರೆ.

ಪೊಲೀಸ್ ಠಾಣೆ ಹೊರಗಡಯಿಂದ ಚೆನ್ನಾಗಿಯೇ ಆಣುತ್ತದೆ. ಆದರೆ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯವಾಗುತ್ತದೆ. ಆಂತರಿಕ ಸೌಂದರ್ಯ ಸರಿ ಇಲ್ಲ ಎಂದೇ ಜನಸಮಾನ್ಯರು ಪೊಲೀಸರ ಮೇಲೆ ಕಿಡಿಕಾರುತ್ತಿದ್ದಾರೆ. ಈ ಠಾಣೆಯ ವಾತಾವರಣ ನೋಡಿದರೆ ಆ ರೀತಿ ಇಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಅದರೆ ಒಳನೋಟ ಯಾವ ರೀತಿ ಇದೆ ಅನ್ನುವುದು ಗೊತ್ತಾಗಬೇಕಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications