ಚಿಕ್ಕಮಗಳೂರು: ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರ
ಚಿಕ್ಕಮಗಳೂರು, ಏಪ್ರಿಲ್ 1: ಕಾಫಿನಾಡಿನ ಕಳಸವನ್ನು ಸರ್ಕಾರ ತಾಲೂಕು ಕೇಂದ್ರವನ್ನಾಗಿ ಘೋಷಿಸಿದೆ. ಆದರೆ, ಕಳಸ ಜನರ ಪಾಲಿಗೆ ಅದು ತಾಲೂಕು ಅಲ್ಲ. ದಾಖಲೆಗಷ್ಟೆ ಸೀಮಿತವಾಗಿರುವ ಶಂಕಿತ ತಾಲೂಕಾಗಿದೆ. ಕಳಸ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಹಣ ನೀಡಿದೆ. ಆದರೆ, ಅಭಿವೃದ್ಧಿ ಮಾತ್ರ ಮರಿಚೀಕೆಯಾಗಿದೆ.
ಕಳಸದಲ್ಲಿ ರಸ್ತೆ, ನೀರು, ವಿದ್ಯುತ್, ಸೇರಿದಂತೆ ಮೂಲಭೂತ ಸೌಲಭ್ಯವಿಲ್ಲದ ನಕ್ಸಲ್ ಪೀಡಿತ ಗ್ರಾಮಗಳು ಇಂದಿಗೂ ಇವೆ. ಹಾಗಾದರೆ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬಂದ ಹಣ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ನಮಗೆ ಲೆಕ್ಕ ಕೊಡಿ, ಇಲ್ಲವಾದರೆ ಮತ ಹಾಕಲ್ಲ ಎಂದು ಕಾಫಿನಾಡ ನಕ್ಸಲ್ ಪೀಡಿತ ಪ್ರದೇಶದ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಕಾಫಿನಾಡಲ್ಲಿ ಇಷ್ಟು ದಿನಗಳ ಕಾಲ ಸುಮಾರು 30ಕ್ಕೂ ಹೆಚ್ಚು ಹಳ್ಳಿಯ ಜನ ನಾನಾ ಕಾರಣಗಳಿಂದ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆದರೆ, ಈಗ ಮಲೆನಾಡು ಭಾಗದ ನಕ್ಸಲ್ ಪೀಡಿತ ಪ್ರದೇಶಗಳ ಗ್ರಾಮಗಳ ಸರದಿ. ಕಳಸ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶದ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಕಾರಣ ನಮ್ಮ ಊರು ಅಭಿವೃದ್ಧಿಯಾಗಿಲ್ಲ. ನಾವು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ನಕ್ಸಲ್ ಪೀಡಿತಗಳ ಅಭಿವೃದ್ಧಿಗೆಂದು ಅನುದಾನ ಕೊಟ್ಟಿದ್ದೇವೆ ಎಂದು ಹೇಳುತ್ತಿದೆ. ಬಂದ ಹಣ ಎಲ್ಲಿ ಹೋಯ್ತು? ಏನಾಯ್ತು? ಅಭಿವೃದ್ಧಿ ಎಲ್ಲಾಯ್ತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇಲ್ಲಿ ಶುದ್ಧ ಗಾಳಿಯೊಂದು ಬಿಟ್ಟರೆ ಬೇರೇನೂ ಇಲ್ಲ. ಬಂದ ಹಣ ಏನಾಯ್ತು ಎಂದು ಹಳ್ಳಿಗರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸರ್ಕಾರ ನಮಗೆ ಸೌಲಭ್ಯ ಕೊಡುತ್ತೇವೆ ಎಂದು ಮೂಗಿಗೆ ತುಪ್ಪ ಸವರುತ್ತದೆ. ಆದರೆ, ಈ ಬಾರಿ ಮತ ಹಾಕಲ್ಲ ಎಂದು ಕಡ್ಡಿ ತುಂಡಾದಂತೆ ಹೇಳಿದ್ದಾರೆ.

ಕಳಸ ತಾಲೂಕಿನ ಮಾವಿನಕೆರೆ, ಕೆ.ಕೆಳಗೂರು, ಯಡೂರು, ಹಳುವಳ್ಳಿ, ಮುಜೇಖಾಣ್, ಹಂದಿಹಡ್ಲು, ಕುಂಬಳಡಿಕೆ ಸೇರಿದಂತೆ ಹಲವು ಗ್ರಾಮಗಳು ಮತದಾನದ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಮುಜೇಖಾನ್, ಹಂದಿಹಡ್ಲು, ಕುಂಬಳಡಿಕೆ ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶ. ಆದ್ರೆ, ಇಲ್ಲೂ ಯಾವುದೇ ಅಭಿವೃದ್ಧಿಯಾಗಿಲ್ಲ ಅಂತ ಮತದಾರರು ಮುನಿಸಿಕೊಂಡಿದ್ದಾರೆ. ಕಳೆದ 16 ವರ್ಷದ ಹಿಂದೆ ಇಲ್ಲಿನ ರಸ್ತೆಗಳು ಡಾಂಬರ್ ಕಂಡಿದ್ದು. ಈಗ ಮಣ್ಣಿನ ರಸ್ತೆಯಂತಾಗಿ ಜನ ಅದನ್ನೇ ಅವಲಂಬಿಸಿದ್ದಾರೆ.
ಮಳೆಗಾದಲ್ಲಿ ಇವರ ಪಾಡು ದೇವರಿಗೆ ಪ್ರೀತಿ. ಈ ಭಾಗದಲ್ಲಿ 300 ಮನೆಗಳಿವೆ. 150 ಮಕ್ಕಳು ಶಾಲೆಗೆ ಹೋಗುತ್ತಾರೆ. ಮಕ್ಕಳನ್ನು ಕರೆದೊಯ್ಯುವ ವಾಹನಗಳು ಜೂನ್‌ನಿಂದ ಆಗಲ್ಲ ಎನ್ನುತ್ತಿದ್ದಾರೆ. ವಾಹನಗಳು ಬರದಿದ್ದರೆ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಂದರೆ ಆಗಲಿದೆ. ಮಕ್ಕಳು ನಿತ್ಯ 20 ಕಿ.ಮೀ. ಸಂಚಾರ ಮಾಡಿ ಓದೋದು ಹೇಗೆ ಎನ್ನುವುದು ಪೋಷಕರ ಪ್ರಶ್ನೆಯಾಗಿದೆ.
ಆರೋಗ್ಯ ಹದಗೆಟ್ಟವರನ್ನ ಆಸ್ಪತ್ರೆಗೆ ಕರೆದೊಯ್ಯುವುದು ಕಷ್ಟ. 15 ವರ್ಷಗಳಿಂದ ಮನವಿ ಮಾಡಿದರು ಪ್ರಯೋಜನವಿಲ್ಲ. 2019ರಿಂದಲೂ ಹಣ ಬಂದಿಲ್ಲ. ಟೆಂಡರ್ ಆಗಿಲ್ಲ ಎನ್ನುತ್ತಿದ್ದಾರೆ. ಪ್ರವಾಹದ ಹಣದಲ್ಲಿ ದುರಸ್ಥಿ ಮಾಡುತ್ತೇವೆ ಎಂದು ಹೇಳಿದ್ದರೂ ಏನೂ ಮಾಡಿಲ್ಲ. ಹಾಗಾಗಿ, ಈ ಬಾರಿ ಯಾರೇ ಬಂದು ಹೇಳಿದರೂ ಮತದಾನ ಮಾಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಮಲೆನಾಡಿನಲ್ಲಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿರುವ ಕುಗ್ರಾಮಗಳು ಹತ್ತಾರಿವೆ. ಎಲ್ಲರೂ ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಬೇಡಿಕೊಳ್ಳುತ್ತಾರೆ. ಆದರೆ ಅಧಿಕಾರಿಗಳು, ಜನನಾಯಕರ ಬೇಜವಾಬ್ದಾರಿ ಕಂಡು ತಮಗೆ ತಾವೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತಾರೆ. ಜಿಲ್ಲೆಯ ಹಿಂದುಳಿದ ಪ್ರದೇಶಗಳಲ್ಲಿ ಕೆಲ ಕೆಲಸಗಳು ಆಗಿವೆ. ಆದರೆ ಆಗದ ಕೆಲಗಳೇ ಹೆಚ್ಚಾಗಿದ್ದು, ಜನ ಕೂಡ ಸೌಲಭ್ಯಗಳಿಗಾಗಿ ಹೋರಾಡಿ, ಇದೀಗ ಚುನಾವಣೆಯನ್ನು ಅಸ್ತ್ರ ಮಾಡಿಕೊಂಡಿದ್ದಾರೆ.












Click it and Unblock the Notifications