Accident News: ಚಾರ್ಮಾಡಿ ಘಾಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ
Accident News: ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದೀಗ ಚಾರ್ಮಾಡಿ ಘಾಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಸೆಪ್ಟೆಂಬರ್ 7) ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಲಾರಿ-ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಕೊಟ್ಟಿಗೆಹಾರದ ಕಡೆ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಯು ಉಜಿರೆ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಲಾರಿ ಗ್ಯಾಸ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಅಪಘಾತ ಘಟನೆಯಿಂದ ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟಿದ ಘಟನೆ ನಡೆದಿದೆ. ಘಾಟಿಯ ಎರಡನೇ ತಿರುವಿನ ಬಳಿ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಇನ್ನು ಘಟನೆ ಬಗ್ಗೆ ವಾಹನ ಸವಾರರು ಧರ್ಮಸ್ಥಳ ಪೊಲೀಸ್ ಠಾಣೆಗೆ ತಿಳಿಸಿದರು. ಬಳಿಕ ಪೊಲೀಸರು ಹಾಗೂ ಸ್ಥಳೀಯರು ಸೇರಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಭಾನುವಾರ ಹಿನ್ನೆಲೆ ಘಾಟಿ ಪ್ರದೇಶದಲ್ಲಿ ಹೆಚ್ಚಿನ ವಾಹನಗಳು ಸಂಚಾರ ಮಾಡುತ್ತಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತದಲ್ಲಿ ನಾಲ್ವರು ಸಾವು: ಇನ್ನು ಚಾಮರಾಜನಗರದ ಗಾಳಿಪುರ ಬೈಪಾಸ್ನಲ್ಲಿ ಲಾರಿ, ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತನದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಮೆರಾನ್, ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತಪಟ್ಟವರು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಆಗಲಿದೆ. ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಮೆರಾನ್ (10) ಎಂಬುವವರು ನಿನ್ನೆ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಭಾನುವಾರ ಆಸ್ಪತ್ರೆಯಲ್ಲಿ ರೆಹಾನ್, ಅದಾನ್ ಪಾಷಾ ಮತ್ತು ಫೈಜಲ್ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈದ್ ಹಬ್ಬ ಹಿನ್ನೆಲೆ ಎಲ್ಲರೂ ನಮಾಜ್ ಮುಗಿಸಿ ಹಬ್ಬವನ್ನ ಆಚರಣೆ ಮಾಡಿದರು. ಶನಿವಾರದ ಹಿನ್ನೆಲೆ ಮೆರಾನ್ ಹಾಗೂ ಆತನ ಸಹೋದರ ಹಾಗೂ ಇಬ್ಬರು ಸ್ನೇಹಿತರು ಶಾಲೆಗೆ ಹೋಗಿರಲಿಲ್ಲ. ಒಟ್ಟು ನಾಲ್ವರು ಟಿವಿಎಸ್ ಎಕ್ಸ್ ಎಲ್ ಬೈಕ್ ತೆಗೆದುಕೊಂಡು ಗಾಳಿಪುರದ ಬಳಿಯಿರುವ ಔಟರ್ ರಿಂಗ್ ರಸ್ತೆಗೆ ಬಂದಿದ್ದು, ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಬೈಕ್ ಹಿಂದೆಯೇ ಇದ್ದ ಕಾರು ಸಹ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ನಾಲ್ವರು ಕೂಡ ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ. ಪರಿಣಾಮ ನಾಲ್ವರಿಗೂ ತಲೆಗೆ ಹೊಡೆತ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಸುಮ್ಮನೆ ಹೇಳ್ರತಾ ಹೇಳಿ.. ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಕೊಳ್ಳಿ. ಚಿಕ್ಕಮಕ್ಕಳಿಗೆ ಬೈಕ್ ಕೊಡಬೇಡಿ ಎಂದು ಸಾರಿ ಸಾರಿ ಹೇಳುತ್ತಲೇ ಇರುತ್ತಾರೆ. ಆದರೆ, ಕೆಲ ಪೋಷಕರು ಮಕ್ಕಳು ಹಠ ಹಿಡಿದ ತಕ್ಷಣವೇ ಬೈಕ್ ಕೊಟ್ಟುಬಿಡುತ್ತಾರೆ. ಆದರೆ, ಮಕ್ಕಳಿಗೆ ಬೈಕ್ ನೀಡುವ ಮುನ್ನ ಸಾವಿರ ಬಾರಿ ಯೋಚನೆ ಮಾಡಬೇಕಾಗುತ್ತದೆ.












Click it and Unblock the Notifications