ಮೂಡಿಗೆರೆ: ಮೀಸಲು ಅರಣ್ಯ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್‍ಗಳು ಪತ್ತೆ, ವಿವರ ಇಲ್ಲಿದೆ
ಸುಮಾರು 60ಕ್ಕೂ ಹೆಚ್ಚು ಬಂದೂಕಿನ ಖಾಲಿ ಕಾಟ್ರೇಜ್‍ಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು-ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಚಿಕ್ಕಮಗಳೂರು, ಮಾರ್ಚ್, 08: ಸುಮಾರು 60ಕ್ಕೂ ಹೆಚ್ಚು ಬಂದೂಕಿನ ಖಾಲಿ ಕಾಟ್ರೇಜ್‍ಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು-ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ವಗೇರ್‍ನಿಂದ ಕನ್ನಹಳ್ಳಿಗೆ ಸಂಪರ್ಕ ಕಲ್ಪಿಸುವ ಅರಣ್ಯ ಪ್ರದೇಶದ ರಸ್ತೆಯಲ್ಲಿ ಕಾಟ್ರೇಜ್‍ಗಳು ಕಂಡುಬಂದಿವೆ.
ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗಾರರು ಕಾಡುಪ್ರಾಣಿಗಳು ಹಾಗೂ ಬೆಳೆ ರಕ್ಷಣೆಗೆ ಅಕ್ರಮ-ಸಕ್ರಮವಾಗಿ ಬಂದೂಕಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಬಂದೂಕುಗಳನ್ನು ಪ್ರಾಣಿ ಬೇಟೆಗೂ ಬಳಸುತ್ತಾರೆ. ಆದರೆ, ಮೀಸಲು ಅರಣ್ಯ ಪ್ರದೇಶದಲ್ಲಿ ಹೀಗೆ 60ಕ್ಕೂ ಹೆಚ್ಚು ಫೈರಿಂಗ್ ಆದ ಖಾಲಿ ಕಾಟ್ರೇಜ್‌ಗಳು ಪತ್ತೆಯಾಗಿವೆ. ಇವುಗಳನ್ನು ಪ್ರಾಣಿಗಳ ಬೇಟೆಗೆ ಬಳಕೆಯಾಗಿರಬಹುದು ಎಂದು ಶಂಕಿಸಲಾಗಿದೆ.

ತನಿಖೆ ಆರಂಭಿಸಿದ ಪೊಲೀಸರು
ಈ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಅಧಿಕಾರಿಗಳು ಕಾಟ್ರೇಜ್‍ಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇಷ್ಟೊಂದು ಕಾಟ್ರೇಜ್‍ಗಳು ಇಲ್ಲಿಗೆ ಹೇಗೆ ಬಂತು? ಯಾರು ತಂದು ಹಾಕಿದ್ದು? ಬೇರೆ ಕಡೆ ಬಳಸಿ ಇಲ್ಲಿಗೆ ತಂದು ಎಸೆದಿದ್ದಾರಾ? ಅಥವಾ ಇಲ್ಲಿಯೇ ಬಳಕೆಯಾಗಿದ್ಯಾ? ಹಾಗೆಯೇ ಇಷ್ಟೊಂದು ಕಾಟ್ರೇಜ್‍ಗಳನ್ನು ಏಕೆ ಬಳಸಿದ್ದಾರೆ ಎನ್ನುವ ದೃಷ್ಟಿಕೋನದಲ್ಲಿ ತನಿಕೆ ಆರಂಭಿಸಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬಂದೂಕುಗಳ ವಿವರ
ಮಲೆನಾಡಿನಲ್ಲಿ 12 ಸಾವಿರಕ್ಕೂ ಅಧಿಕ ಸಕ್ರಮ ಬಂದೂಕುಗಳಿವೆ. ಆದರೆ ಇದರಲ್ಲಿ ಅರ್ಧದಷ್ಟು ಅಕ್ರಮ ಬಂದೂಕುಗಳು ಇವೆ ಎನ್ನುವ ಮಾಹಿತಿ ಇದೆ. ಬಂದೂಕುಗಳು ಬೆಳೆ-ಪ್ರಾಣ ಉಳಿಸಿಕೊಳ್ಳುವುದರ ಜೊತೆ ಪ್ರಾಣಿ ಬೇಟೆ ಹಾಗೂ ಸಮಾಜದಲ್ಲಿ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಕೆಯಾಗಿದ್ದು ಇದೆ. ಆದರೆ ಅರಣ್ಯ ಪ್ರದೇಶದಲ್ಲಿ ಇಷ್ಟೊಂದು ಕಾಟ್ರೇಜ್‍ಗಳು ಪತ್ತೆಯಾಗಿರುವುದು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದ್ದು, ಇದೀಗ ತನಿಖೆ ಕೈಗೊಂಡಿದ್ದಾರೆ.

51ಕ್ಕೂ ಹೆಚ್ಚು ಬಂದೂಕುಗಳು ಪೊಲೀಸರ ವಶಕ್ಕೆ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮತ್ತು ಪರವಾನಗಿ ಇದ್ದವರ ಬಳಿಯೂ 51ಕ್ಕೂ ಹೆಚ್ಚು ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗಾದರೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇತ್ತೀಚಿಗೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಬಿದಿರೆ ಗ್ರಾಮದಲ್ಲಿ ರಮೇಶ್ ಎಂಬಾತ ಬದೂಕಿನಿಂದ ಗುಂಡು ಹಾರಿಸಿದ್ದು, ಇದರ ಪರಿಣಾಮ ಬೈಕ್‍ನಲ್ಲಿ ಹೋಗುತ್ತಿದ್ದ ಸಹೋದರಿಬ್ಬರು ಮೃತಪಟ್ಟಿದ್ದರು. ಈ ಘಟನೆ ಎಚ್ಚೆತ್ತ ಪೊಲೀಸ್ ಇಲಾಖೆ ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಘಟನೆಯಲ್ಲಿ ಪ್ರವೀಣ್ ಹಾಗೂ ಪ್ರಕಾಶ್ ಮೃತರಾಗಿದ್ದರು. ಘಟನೆಯ ಬಳಿಕ ಕಾರ್ಯ ಪ್ರವೃತ್ತವಾದ ಪೊಲೀಸ್ ಇಲಾಖೆ ಪರವಾನಿಗೆ ಹೊಂದಿರುವ 10 ಬಂದೂಕು ಸೇರಿದಂತೆ ಪರವಾನಿಗೆ ರಹಿತ 41 ಬಂದೂಕು, ಎರಡು ರಿವಾಲ್ವಾರ್‌ಗಳು ವಶಕ್ಕೆ ಪಡೆದಿದೆ. ಹಾಗೂ ಈ ಸಂಬಂಧ 3 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಿಳಿಸಿದ್ದರು.












Click it and Unblock the Notifications