ಲಂಚ ಪಡೆಯುವ ಕಳ್ಳರನ್ನು ಸರ್ಕಾರ ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ- ಶಾಸಕ ಸಿ.ಟಿ ರವಿ
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಿಜೆಪಿ ಸರಕಾರ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದೆ ಎಂಬುದನ್ನು ಸಾಬೀತು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು, ಮಾರ್ಚ್ 4: ಕಾಂಗ್ರೆಸ್ ಸರ್ಕಾರ ಇದಿದ್ದರೇ ಭ್ರಷ್ಟಾಚಾರಿಗಳ ಮನೆಗಳ ಮೇಲೆ ರೇಡ್ ಆಗುತ್ತಿರಲಿಲ್ಲ, ಪ್ರಕರಣ ಕೂಡ ದಾಖಲಾಗುತ್ತಿರಲಿಲ್ಲ. ಭ್ರಷ್ಟರ ರಕ್ಷಣೆಯ ಕೆಲಸ ಆಗುತ್ತಿತ್ತು ಎಂದು ಬಿಜೆಪಿ ಶಾಸಕನ ಮಗನ ಮೇಲೆ ಲೋಕಾಯುಕ್ತ ದಾಳಿ ಘಟನೆ ಸಂಬಂಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದೆ ಎಂಬುದನ್ನು ಸಾಬೀತು ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಬದಲು ಕಾಂಗ್ರೆಸ್ ಸರ್ಕಾರದ ಇದಿದ್ದರೇ, ರೈಡ್ ಆಗುತ್ತಿರಲಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಆಗುತ್ತಿತ್ತು ಎಂದರು.

ಕಾಂಗ್ರೆಸ್ ಸರ್ಕಾರ ಎಸಿಬಿ ರಚನೆ ಮಾಡಿ 54 ಪ್ರಕರಣಗಳಿಗೆ ಕ್ಲೀನ್ ಚಿಟ್ ನೀಡಿದರು. ಮಕ್ಕಳ ಹಾಸಿಗೆ-ದಿಂಬಿನಲ್ಲಿ ಹಣ ಹೊಡೆದುಕೊಂಡು ತಿಂದವರಿಗೆ ಕ್ಲೀನ್ ಚಿಟ್ ನೀಡಿದರು. ಮರಳು ದಂಧೆ ಮಾಡಿದವರಿಗೂ ಕ್ಲೀನ್ ಚಿಟ್ ನೀಡಿದರು ಎಂದ ಅವರು, ರಿಡ್ಯೂನಲ್ಲಿ 8ಸಾವಿರ ಕೋಟಿ ಸರ್ಕಾರಕ್ಕೆ ನಷ್ಟ ಆಗಿದೆ ಎಂದು ಕೆಂಪಣ್ಣ ಆಯೋಗ ವರದಿ ನೀಡಿದೆ. ಕದ್ದ ಕಳ್ಳರು ಯಾರೆಂದು ಪ್ರಾಮಾಣಿಕ ತನಿಖೆಯಾಗಿದ್ದರೇ, ಕಳ್ಳ ಯಾರು, ಲೂಟಿ ಹೊಡೆದವರು ಯಾರೆಂದು ಗೊತ್ತಾಗುತ್ತಿತ್ತು ಎಂದರು.
ಲಂಚ ಪಡೆಯುವ ಕಳ್ಳರು ಯಾರೇ ಆಗಿದ್ದರೂ ಅವರನ್ನು ಸರ್ಕಾರ ಬಚಾವ್ ಮಾಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ಈ ಲೋಕಾಯುಕ್ತ ದಾಳಿಯೇ ಉತ್ತಮ ನಿದರ್ಶನ, ಅದೇ ಕಾರಣಕ್ಕೆ ರೈಡ್ ಆಗಿರುವುದು ಎಂದು ತಿಳಿಸಿದರು.
ಅಭಿವೃದ್ಧಿ ವಿಷಯದಲ್ಲಿ ತಾವು ಎಂದೂ ಹಿಂದೆ ಬಿದ್ದಿಲ್ಲ
ವಿದ್ಯಾ ಕಾಫಿ ಸಂಸ್ಥೆ ನಗರ ಹೊರವಲಯದ ಹಿರೇಮಗಳೂರಿನಲ್ಲಿ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಿ.ಟಿ ರವಿ, ನಮ್ಮ ಅವಧಿಯಲ್ಲಿ ಹಿರೇಮಗಳೂರು ಗ್ರಾಮದ ಕಲ್ಯಾಣಿಯನ್ನು ನವೀಕರಣ ಮಾಡಲಾಗಿದೆ. ಗ್ರಾಮದ ಬಹಳಷ್ಟು ದೇವಾಲಯಗಳು ಪುನರುತ್ಥಾನಗೊಳಿಸಲಾಗಿದೆ. ಯಾತ್ರಿ ನಿವಾಸ ಅಂಬೇಡ್ಕರ್ ಭವನ ಜಗ ಜೀವನ್ ರಾಮ್ ಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದ ಕಲ್ಲಿನ ಕಾಂಪೌಂಡ್ ನಿರ್ಮಾಣಕ್ಕೆ 50ಲಕ್ಷ ರೂ ನೀಡಲಾಗಿದೆ. ಇದೀಗ ಗ್ರಾಮಸ್ಥರು ಮುತ್ತಿನಮ್ಮ ಮತ್ತು ಕೆಂಚರಾಯ ದೇವಾಲಯದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಆ ಕಾರ್ಯದಲ್ಲಿ ತಾವು ಸದಾ ಅವರೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಎಂಆರ್‌ಪಿಎಲ್‌ನಿಂದ 50 ಲಕ್ಷ ಸಿಎಸ್‌ಆರ್ ಅನುದಾನವನ್ನು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದ್ದು, ಆ ಹಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಬೇಲೂರು ರಸ್ತೆಯ ಪದವಿಪೂರ್ಣ ಕಾಲೇಜಿಗೆ ಪ್ರಯೋಗಾಲಯ ಮತ್ತು ಕೊಠಡಿ ನಿರ್ಮಾಣಕ್ಕೆ 25 ಲಕ್ಷ ರೂ ಒದಗಿಸಲಾಗಿದೆ ಎಂದರು.
ಬಿಬಿಸಿಎಲ್ ನಿಂದ 32 ಲಕ್ಷ ರೂ ಅನುದಾನವನ್ನು ಹದಿ ನಾಲ್ಕು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಟ್ ನಿರ್ಮಾಣಕ್ಕೆ ನೀಡಲಾಗಿದೆ. ತಮ್ಮ ಸಲಹೆ ಮತ್ತು ಮನವಿಗೆ ಸ್ಪಂದಿಸಿ ಹಿರೇಮಗಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಿದ ದಾನಿ ವಿದ್ಯಾ ಕಾಫಿ ಸಂಸ್ಥೆಯ ಶ್ಯಾಮ್ ಪ್ರಸಾದ್ ಮತ್ತು ಸಹೋದರರಿಗೆ ಶಾಸಕ ಸಿ.ಟಿ ರವಿ ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications