ಆತಂಕ ಸೃಷ್ಟಿಸಿದ 50ರ ನೋಟಿನ ಮೇಲಿನ ಸಂದೇಶ
ಚಿಕ್ಕಮಗಳೂರು, ಅಕ್ಟೋಬರ್ 12: "ಟಾರ್ಗೆಟ್ ಬಾಳೆಹೊನ್ನೂರು -ಭಾರತೀಯರನ್ನು ನಾವು ಬಿಡುವುದಿಲ್ಲ. ನಾವು ಪಾಕಿಸ್ತಾನದಿಂದ ಆರು ಜನ ಬಂದಿದ್ದೇವೆ, ರಾಜ್ಯದ ಐದು ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದೇವೆ" ಎಂಬ ಬರವಣಿಗೆ ಹೊಂದಿರುವ ಹಳೆಯ 50 ರೂಪಾಯಿ ನೋಟಿನ ಚಿತ್ರವೊಂದು ಈಗ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಮಲೆನಾಡಲ್ಲಿ ಆತಂಕ ಉಂಟು ಮಾಡಿದೆ.
ನಿನ್ನೆಯಿಂದ ಕೊಪ್ಪ, ಬಾಳೆಹೊನ್ನೂರು ಭಾಗದಲ್ಲಿ ಈ ರೀತಿಯ ಬರಹ ಇರುವ ನೋಟಿನ ಚಿತ್ರ ವಾಟ್ಸಾಪ್ ನಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಈವರೆಗೂ ಈ ನೋಟ್ ಯಾರ ಬಳಿ ಇದೆ ಎಂಬುದು ಗೊತ್ತಾಗಿಲ್ಲ ಹಾಗೂ ಸಾಮಾಜಿಕ ಜಾಲತಾಣಗಲ್ಲಿ ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದು ಸಹ ಗೊತ್ತಾಗಿಲ್ಲ. ಅಲ್ಲದೇ ಇದರಲ್ಲಿ ತಪ್ಪು ತಪ್ಪಾಗಿ ಕನ್ನಡ ಅಕ್ಷರಗಳಿದ್ದು ನಾವು ಕನ್ನಡವನ್ನು ಕಲಿತುಕೊಂಡಿದ್ದೇವೆ ಹಾಗೂ ನಮಗೆ ಕನ್ನಡಿಗರು ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಸಹ ಈ ಅನಾಮಿಕ ನೋಟ್ ಮೇಲೆ ನಮೂದಿಸಿದ್ದಾರೆ.

ಮಲೆನಾಡು ಭಾಗವಾದ ಬಾಳೆಹೊನ್ನೂರು, ಕೊಪ್ಪ, ಕಳಸ ಸೇರಿದಂತೆ ಈ ಭಾಗದಲ್ಲಿ ಸಾಕಷ್ಟು ಕಾಫಿ ತೋಟಗಳಿದ್ದು ಇಲ್ಲಿ ಸಾವಿರಾರು ಜನ ಬಾಂಗ್ಲಾ ವಲಸಿಗರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ವಿಷಯ ಮಲೆನಾಡಿಗರನ್ನು ಆತಂಕಗೊಳಿಸಿದೆ. ಪೊಲೀಸರಿಗೆ ಈವರೆಗೂ ಈ ನೋಟಿನ ಕುರಿತು ಮಾಹಿತಿ ದೊರೆತಿಲ್ಲ. ಆದರೆ ಇದು ಆತಂಕ ಸೃಷ್ಟಿಸಲೆಂದೇ ಮಾಡಿರುವ ಕೆಲಸವಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಳೆಹೊನ್ನೂರು ಸಿಪಿಐ, ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಿಂದ ತನಿಖೆ ನಡೆಸುತ್ತಿದ್ದು, ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.












Click it and Unblock the Notifications