ಲಂಚಕ್ಕೆ ಬೇಡಿಕೆ: ಚಿಕ್ಕಮಗಳೂರಿನಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಗ್ರಾಮ ಸಹಾಯಕ
ನಿವೇಶನ ಹಕ್ಕುಪತ್ರದ ಚಕ್ಕುಬಂಧಿ ಸರಿಪಡಿಸಿಕೊಡುತ್ತೇನೆ ಎಂದು ಗ್ರಾಮ ಸಹಾಯಕ ಶಿವಣ್ಣ ಮಹಿಳೆಯೊಬ್ಬರಿಂದ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ, 22: ನಿವೇಶನ ಹಕ್ಕುಪತ್ರದ ಚಕ್ಕುಬಂಧಿ ಸರಿಪಡಿಸಿಕೊಡುತ್ತೇನೆ ಎಂದು ಗ್ರಾಮ ಸಹಾಯಕನೋರ್ವ ಮಹಿಳೆಯೊಬ್ಬರಿಂದ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಗ್ರಾಮ ಸಹಾಯಕನನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ
ಗ್ರಾಮ ಸಹಾಯಕ ಶಿವಣ್ಣ ಬಂಧಿತ ಆರೋಪಿಯಾಗಿದ್ದು, ಈತ ಪಟ್ಟಣ ಸಮೀಪದ ಶ್ರೀರಾಂಪುರ ಗ್ರಾಮದ ನಿವಾಸಿ ಸರೋಜಮ್ಮ ಎಂಬವರಿಂದ ಲಂಚ ಸ್ವೀಕರಿಸುತ್ತಿದ್ದ. ಈ ವೇಳೆ ಈತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸರೋಜಮ್ಮ ಅವರು ಪತಿ ಗೋವಿಂದಪ್ಪ ಎಂಬವರ ಹೆಸರಿನಲ್ಲಿದ್ದ ನಿವೇಶನದ ಹಕ್ಕುಪತ್ರವನ್ನು 94(ಸಿ) ಯೋಜನೆಯಡಿ 2022, ಆಗಸ್ಟ್ 3ರಂದು ಪಡೆದಿದ್ದರು. ಅದರ ಚಕ್ಕುಬಂಧಿಯಲ್ಲಿದ್ದ ಲೋಪ ಸರಿಪಡಿಸಲು 2022, ಡಿಸೆಂಬರ್ 8ರಂದು ಅರ್ಜಿ ಸಲ್ಲಿಸಿದ್ದರು.

10 ಸಾವಿರ ರೂ. ಹಣಕ್ಕೆ ಬೇಡಿಕೆ
ಈ ಸಂಬಂಧ ಪಟ್ಟಣದಲ್ಲಿರುವ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿದ್ದ ಗ್ರಾಮ ಸಹಾಯಕ ಶಿವಣ್ಣ ಎಂಬಾತ, ಚಕ್ಕುಬಂಧಿ ಸರಿಪಡಿಸಲು ಸರ್ವೇಯರ್, ಶಿರಸ್ತೇದಾರ್, ತಹಶೀಲ್ದಾರ್ ಬಳಿ ಓಡಾಡಿ ಕೆಲಸ ಮಾಡಿಸಬೇಕು. ಆದ್ದರಿಂದ 10 ಸಾವಿರ ರೂಪಾಯಿ ಹಣ ನೀಡಬೇಕು ಎಂದು ಸೂಚಿಸಿದ್ದರು. ಸರೋಜಮ್ಮ ಮುಂಗಡವಾಗಿ ಶಿವಣ್ಣನಿಗೆ 3 ಸಾವಿರ ರೂಪಾಯಿ ಹಣವನ್ನು ನೀಡಿದ್ದರು.

ಗ್ರಾಮ ಸಹಾಯಕ ಶಿವಣ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಸರೋಜಮ್ಮ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಬುಧವಾರ ಸರೋಜಮ್ಮ ಅವರಿಂದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾ ಎಂದು ತಿಳಿದುಬಂದಿದೆ. ಬಂಧಿತ ಶಿವಣ್ಣ ಅವರನ್ನು ರಾತ್ರಿ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications