ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಕುಮಾರಸ್ವಾಮಿ ಲೋಕಸಭಾ ಚುನಾವಣೆ ತಂತ್ರಗಾರಿಕೆ!
ಚಿಕ್ಕಮಗಳೂರು, ಜನವರಿ 10: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಪಕ್ಷಗಳು ಚುನಾವಣೆ ಗೆಲ್ಲಲು ತಂತ್ರವನ್ನು ರೂಪಿಸುತ್ತಿವೆ. ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಜೆಡಿಎಸ್ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ? ಎಂದು ಕಾದು ನೋಡಬೇಕಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಾಫಿನಾಡು ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ 2024ರ ಲೋಕಸಭಾ ಚುನಾವಣೆಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಮಂಡ್ಯ, ಮೈಸೂರು ಲೋಕಸಭಾ ಕ್ಷೇತ್ರಗಳ ಮೇಲೆ ಅವರು ಕಣ್ಣಿಟ್ಟಿದ್ದು, ಸ್ಥಳೀಯ ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಪ್ರಭಾವ ಉಳಿಸಿಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಮಂಡ್ಯ, ಮೈಸೂರು ಭಾಗದ ನಾಯಕರೊಂದಿಗೆ ಸಮಾಲೋಚನೆಗಾಗಿಯೇ ರೆಸಾರ್ಟ್‌ಗೆ ಆಗಮಿಸಿದ್ದಾರೆ.
ಜೆಡಿಎಸ್ ನಾಯಕರೊಂದಿಗೆ ಆಗಮಿಸಿರುವ ಕುಮಾರಸ್ವಾಮಿ, ಟಿಕೆಟ್, ಕ್ಷೇತ್ರದ ಚಿತ್ರಣದ ವಿಚಾರವಾಗಿ ನಾಯಕರೊಂದಿಗೆ ಸುದೀರ್ಘ ಚರ್ಚೆಯನ್ನು ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ.
ಮಂಡ್ಯದ ಮಾಜಿ ಸಂಸದ ಸಿ. ಎಸ್. ಪುಟ್ಟರಾಜು ಸೇರಿದಂತೆ ಹಲವು ನಾಯಕರು ಕುಮಾರಸ್ವಾಮಿ ನಡೆಸುತ್ತಿರುವ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡಬೇಕಾ? ಬೇಡವಾ? ಎಂದು ಸಭೆಯಲ್ಲಿ ಕುಮಾರಸ್ವಾಮಿ ನಾಯಕರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಮಂಗಳವಾರ ರಾತ್ರಿಯೇ ಚಿಕ್ಕಮಗಳೂರು ತಾಲೂಕಿನ ಹನಿ ಡ್ಯೂ ರೆಸಾರ್ಟ್‌ಗೆ ಆಗಮಿಸಿದ್ದಾರೆ. ಹಲವಾರು ಜೆಡಿಎಸ್ ನಾಯಕರು ಸಹ ಆಗಮಿಸಿದ್ದು, ಸರಣಿ ಸಭೆಗಳು ನಡೆಯುತ್ತಿವೆ. ಬುಧವಾರವೂ ಹಲವು ನಾಯಕರ ಜೊತೆ ಕುಮಾರಸ್ವಾಮಿ ಚರ್ಚೆ ಮಾಡುತ್ತಿದ್ದಾರೆ.
ಎಂಎಲ್‌ಸಿ ಭೋಜೇಗೌಡ ಹೇಳಿಕೆ; ಎಚ್. ಡಿ. ಕುಮಾರಸ್ವಾಮಿ ಚಿಕ್ಕಮಗಳೂರು ರೆಸಾರ್ಟ್ ವಾಸ್ತವ್ಯದ ಕುರಿತು ಎಂಎಲ್‌ಸಿ ಭೋಜೇಗೌಡ ಹೇಳಿಕೆ ನೀಡಿದ್ದಾರೆ. "ಕುಮಾರಸ್ವಾಮಿ ಬಂದಿದ್ದಾರೆ ಅಂದರೆ ಎಲ್ಲರೂ ಬರಲ್ವಾ?. ಪುಟ್ಟರಾಜು, ಸಾ. ರಾ. ಮಹೇಶ್ ಅವರನ್ನು ನಾನೇ ಆಹ್ವಾನಿಸಿದ್ದೇನೆ. ಕುಮಾರಣ್ಣನ ಜೊತೆ ಕುಳಿತಾಗ ರಾಜಕೀಯ ಮಾತನಾಡಲ್ವ?" ಎಂದರು.
"ಕುಮಾರಸ್ವಾಮಿ ಮಂಡ್ಯದಲ್ಲಿ ನಿಲ್ಲಬೇಕು ಅಂತಾ ಹೇಳಿಲ್ಲ. ನಮ್ಮ ಕಾರ್ಯಕರ್ತರು ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ನಿಲ್ಲಬೇಕು ಎಂಬ ಒತ್ತಡವಿದೆ. ನಾಲ್ಕೈದು ಸೀಟುಗಳನ್ನು ಕೊಡುತ್ತಾರೆ. ಎಲ್ಲೆಲ್ಲಿ ನಿಲ್ಲಬೇಕು? ಎಂದು ಚರ್ಚೆ ನಡೆಯುತ್ತಿದೆ" ಎಂದು ತಿಳಿಸಿದರು.
"ನಮ್ಮ ಶಕ್ತಿ ಎಲ್ಲಿ ಇದೆ, ಅಲ್ಲಿ ಕಣಕ್ಕಿಳಿಯಬೇಕು. ಪ್ರಭಾವ ಇಲ್ಲದ ಕಡೆ ಬಿಜೆಪಿ ಅಭ್ಯರ್ಥಿಗೆ ಬಿಟ್ಟುಕೊಡಬೇಕು ಎಂದು ಚರ್ಚೆ ನಡೆಯುತ್ತಿದೆ. ಕಾರ್ಯಕರ್ತರು ಒಂದಾಗಬೇಕು, ಸಂಕ್ರಾತಿ ಎಂದು ದೊಡ್ಡವರು ಹೇಳುತ್ತಿದ್ದಾರೆ. ಅವಾಗ ಶುಭಸುದ್ದಿ ಬರಬಹುದು" ಎಂದು ಭೋಜೇಗೌಡ ಹೇಳಿದರು.
"ಮಂಡ್ಯ, ಹಾಸನ ನಮಗೆ ಉತ್ತಮ ಪ್ರಭಾವವಿದೆ. ಆದರೆ ಸೋತಿರಬಹುದು ಸೋತ ಎಲ್ಲಾ ಶಾಸಕರು ಕುಮಾರಣ್ಣ ನಿಲ್ಲಬೇಕು ಎಂಬ ಅಭಿಪ್ರಾಯ ಹೇಳಿದ್ದಾರೆ. ಕುಮಾರಣ್ಣ ಒಂದು ಮಾತು ಹೇಳಿದ್ದಾರೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು" ತಿಳಿಸಿದರು.
"ಮಂಡ್ಯ ಕ್ಷೇತ್ರ ನಾವು ಕೇಳಿದ್ದೆವೋ? ಅಥವಾ ಹಾಲಿ ಎಂಪಿಗೆ ಕೊಡಬೇಕೋ? ಎಂಬ ವಿಚಾರ ಆಚೆ ಬಂದಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹೇಳಿಕೆ ನೀಡಿದರು.












Click it and Unblock the Notifications