ಭೂಕಬಳಿಕೆ ಆರೋಪ: ಚಿಕ್ಕಮಗಳೂರು ಜಿ.ಪಂ ಸದಸ್ಯನ ವಿರುದ್ಧ ಎಫ್‍ಐಆರ್
ಚಿಕ್ಕಮಗಳೂರು, ಡಿಸೆಂಬರ್ 5: ಭೂ ಕಬಳಿಕೆ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸದಸ್ಯ ಶೃಂಗೇರಿ ಶಿವಣ್ಣ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮ್ಮ ಜಾಗದ ಪಕ್ಕದಲ್ಲಿರುವ ಸರ್ವೇ ನಂಬರ್ 215 ರಲ್ಲಿ ಸುಮಾರು 2 ಗುಂಟೆ ಜಾಗವನ್ನು ಅನಧಿಕೃತವಾಗಿ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ತಹಸೀಲ್ದಾರ್ ದೂರು ನೀಡಿದ್ದಾರೆ.
ಶೃಂಗೇರಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಶಿವಶಂಕರ್(ಶೃಂಗೇರಿ ಶಿವಣ್ಣ) ಪಟ್ಟಣದ ತಮ್ಮ ಜಾಗದ ಪಕ್ಕದಲ್ಲಿರುವ ಸರ್ವೇ ನಂಬರ್ 215ರ ಸರ್ಕಾರಿ ಭೂಮಿಯಲ್ಲಿ 2 ಗುಂಟೆಯನ್ನು ಅನಧಿಕೃತವಾಗಿ ಕಬಳಿಸಿ ಜೆಸಿಬಿಯಿಂದ ಸಮತಟ್ಟು ಮಾಡಿದ್ದಾರೆ.

ಅನಧಿಕೃತವಾಗಿ ಭೂ ಕಬಳಿಕೆ ಮಾಡಿರುವ ಜಾಗವು ತಗ್ಗು ಪ್ರದೇಶವಾಗಿದ್ದು, ಇದರಿಂದ ಶೃಂಗೇರಿ ಜೆಎಂಎಫ್‍ಸಿ ನ್ಯಾಯಾಲಯ, ನ್ಯಾಯಾಧೀಶರ ವಸತಿ ಗೃಹ, ತಾಲ್ಲೂಕು ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ವಿದ್ಯಾರ್ಥಿ ನಿಲಯಗಳು ಭೂ ಕುಸಿತವಾಗುವ ಸಂಭವ ಹೆಚ್ಚಿದೆ ಎಂದು ಹೇಳಲಾಗಿದೆ.
ಭೂ ಕಬಳಿಕೆಯಿಂದ ಸಾರ್ವಜನಿಕ ಕಟ್ಟಡಗಳಿಗೆ ಗಂಭೀರ ರೂಪದ ಹಾನಿಯಾಗುವ ಸ್ಥಿತಿ ಇರುತ್ತದೆ. ಆದ್ದರಿಂದ ಅನಧಿಕೃತವಾಗಿ ಭೂ ಕಬಳಿಕೆ ಮಾಡಿರುವ ಶಿವಶಂಕರ್ ಬಿನ್ ಬಂಗಾರುಸ್ವಾಮಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ದೂರಿನಲ್ಲಿ ತಿಳಿಸಿದ್ದಾರೆ.

Recommended Video
2018 ರಲ್ಲಿ ಅನಧಿಕೃತವಾಗಿ ತಮ್ಮ ಜಮೀನಿನ ಪಕ್ಕದಲ್ಲಿದ್ದ 2 ಗುಂಟೆ ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆಯಲಾಗಿತ್ತು. ಈ ಸಂಬಂಧ 2018 ರಲ್ಲಿ ದೂರು ದಾಖಲಾಗಿತ್ತು. ಉಪ ವಿಭಾಗಾಧಿಕಾರಿ ನ್ಯಾಯಾಲಯ ಹಾಗೂ ಹೈಕೋರ್ಟ್ ನಲ್ಲಿ ಪ್ರಕರಣದ ತನಿಖೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪತ್ರದ ಮೂಲಕ ತಿಳಿಸಿದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲು ಮಾಡಲಾಗಿದೆ ಎಂದು ಶೃಂಗೇರಿ ತಹಸೀಲ್ದಾರ್ ಅಂಬುಜಾಕ್ಷಿ ತಿಳಿಸಿದರು.












Click it and Unblock the Notifications