ಲಕ್ಷಾಂತರ ಭಕ್ತರ ಕಣ್ಮನ ಸೆಳೆದ ಕಲ್ಲೇಶ್ವರ ಸ್ವಾಮಿ ತೆಪ್ಪೋತ್ಸವ
ಕಡೂರು, ಡಿಸೆಂಬರ್ 26: ಐತಿಹಾಸಿಕ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ಅವರ ತೆಪ್ಪೋತ್ಸವವನ್ನು ಲಕ್ಷಾಂತರ ಭಕ್ತರು ಭಕ್ತಿಯಿಂದ ಕಣ್ಮನ ತುಂಬಿಕೊಂಡರು. ಭಾನುವಾರ ನಡೆದ ಈ ತೆಪ್ಪೋತ್ಸವಕ್ಕಾಗಿ ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಸೇವಾ ಸಮಿತಿ ಹಾಗೂ ಸಿಂಗಟಗೆರೆ ಮತ್ತು ಫಿರ್ಕಾ 7 ಹಳ್ಳಿ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಸಿದ್ದತೆಯನ್ನು ಕೈಗೊಂಡಿದ್ದರು. ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಈ ರೀತಿಯ ತೆಪ್ಪೋತ್ಸವ ನಡೆಸುವುದು ವಾಡಿಕೆಯಾಗಿದ್ದು 2005ರಲ್ಲಿ ತೆಪ್ಪೋತ್ಸವ ನಡೆದಿತ್ತು. ಅದಾದ ಬಳಿಕ 16 ವರ್ಷಗಳ ನಂತರ ಇದೀಗ ತೆಪ್ಪೋತ್ಸವ ನಡೆಯುತ್ತಿದೆ. ತೆಪ್ಪೋತ್ಸವ ವೀಕ್ಷೆಣೆಗಾಗಿ ಸಿಂಗಟಗೆರೆ ಸುತ್ತಮುತ್ತಲ ನೂರಾರು ಹಳ್ಳಿಗಳ ಜನರಲ್ಲದೆ ರಾಜ್ಯದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹಾಸನ, ಬೆಂಗಳೂರು ಸೇರಿದಂತೆ ಮುಂತಾದ ಜಿಲ್ಲೆಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿದ್ದರು.
ಬೃಹತ್‍ಕೆರೆಯ ಏರಿಯ ಮೇಲೆ ಸುತ್ತಲೂ ಲಕ್ಷಾಂತರ ಜನ ತೆಪ್ಪೋತ್ಸವ ವೀಕ್ಷಿಸಲು ಬೆಳಗ್ಗಿನಿಂದಲೇ ನಿಂತಿದ್ದು ರಕ್ಷಣೆಗಾಗಿ ಕೆರೆಯ ಸುತ್ತಲೂ ಏರಿಯ ಮೇಲೆ ಮರದ ತುಂಡುಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಂಗಟಗೆರೆ, ಪಂಚನಹಳ್ಳಿ, ಯಗಟಿ ಮತ್ತು ಬೀರೂರು, ಕಡೂರು ಪೊಲೀಸ್ ಸೂಕ್ತ ಬಂದೊಬಸ್ತು ಕಲ್ಪಿಸಿದ್ದರು. ನಿರೀಕ್ಷೆಗೂ ಮೀರಿದ್ದ ಜನ ಸಾಗರ ಹರಿದು ಬಂದಿದ್ದರಿಂದ ಸಂಚಾರ ಮತ್ತು ಊಟದ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥೆ ಉಂಟಾಗಿತ್ತು.
ಮಧ್ಯಾಹ್ನ 12.01 ಗಂಟೆಗೆ ಸಲ್ಲುವ ಅಭಿಜನ್ ಲಗ್ನದಲ್ಲಿ ತೆಪ್ಪೋತ್ಸವ ಆರಂಭವಾಗಬೇಕಾಗಿತ್ತು ಆದರೆ ತೆಪ್ಪವು ಗಟ್ಟಿಯಾಗಿ ದಡದಲ್ಲಿ ಹೂತುಕೊಂಡಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯ ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಹರಸಾಹಸಪಟ್ಟು ತೆಪ್ಪವನ್ನು ಚಲಿಸುವಂತೆ ಮಾಡಿದರು. ಈ ಸಮಯ ಭಕ್ತರ ಉದ್ಘೋಷಣೆ, ದೇವರ ನಾಮಸ್ಮರಣೆ ಮುಗಿಲು ಮಟ್ಟಿತು. ತೆಪ್ಪದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ 7 ಹಳ್ಳಿ ಫಿರ್ಕಾ ಗ್ರಾಮಸ್ಥರಲ್ಲಿ ಎಲ್ಲಾ ಕೋಮಿನ ಓರ್ವರನ್ನು ತೆಪ್ಪದಲ್ಲಿ ಕೂರಿಸಿದ್ದು ಜಾತ್ಯಾತೀತ ಮನೋಭಾವನೆಗೆ ಸಾಕ್ಷಿಯಾಯಿತು.

ಕೀಲುಕುದುರೆ, ಚಿಟ್ಟಿಮೇಳ, ವೀರಗಾಸೆ ಮೊದಲಾದ ಮೆರವಣಿಗೆ
ಇದಕ್ಕೂ ಮುನ್ನ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ರುದ್ರಾಭೀಷೇಕ, ಮಹಾಮಂಗಳಾರತಿ ನಡೆದು ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಪಟ್ಟಣದ ರಾಜ ಬೀದಿಯಲ್ಲಿ ಕರೆತಂದು ಅಲಂಕೃತವಾಗಿ ಕಂಕೊಳಿಸುತ್ತಿದ್ದ ತೆಪ್ಪದಲ್ಲಿದ್ದ ದಾರ ಮಂಟಪಕ್ಕೆ ಕರೆತರಲಾಯಿತು. 7 ಹಳ್ಳಿಯ ಇತರ ದೇವರುಗಳಾದ ಉಡುಸಾಲಮ್ಮ, ಬೀರದೇವರು, ಬನಶಂಕರಿ, ಚಿಕ್ಕಮ್ಮ, ಮಲ್ಲಿಯಮ್ಮ ಉತ್ಸವ ಮೂರ್ತಿ ಪಾಲ್ಗೊಂಡಿದ್ದವು. ಕೀಲುಕುದುರೆ, ಚಿಟ್ಟಿಮೇಳ, ವೀರಗಾಸೆ, ಡೊಳ್ಳುಕುಣಿತ, ನಾದಸ್ವರ ವಾದನ, ಧ್ವಜಕುಣಿತ ಮುಂತಾದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತರ ಮನಸೂರೆಗೊಂಡವು.

ಮಂಗಳೂರಿನ ಗುರು ಚಂಡೆಮೇಳ
ಶನಿವಾರ ಗ್ರಾಮದೇವತೆ ಶ್ರೀ ಗಂಗಮ್ಮ ದೇವಿ ಅವರ ಕಿರು ತೆಪ್ಪೋತ್ಸವ ಜರುಗಿದ್ದು ಶುಕ್ರವಾರದಿಂದಲೇ ಗ್ರಾಮದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. 2 ವರ್ಷದ ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕದ ನಂತರ ಮೊದಲ ಕಾರ್ಯಕ್ರಮ ಇದಾಗಿರುವುದರಿಂದ ಸಹಜವಾಗಿಯೇ ಲಕ್ಷಾಂತರ ಜನ ಭಕ್ತರು ಸೇರಿದ್ದರು. ಸಂಜೆ ಅಡ್ಡಪಲ್ಲಕ್ಕಿ ಉತ್ಸವ ನಡೆದ ನಂತರ ರಾತ್ರಿ ಆಕರ್ಷಕ ಮದ್ದುಗುಂಡಿನ ಕಾರ್ಯಕ್ರಮ ಮತ್ತು ಮಂಗಳೂರಿನ ಗುರು ಚಂಡೆಮೇಳ ನಡೆದು ಅಸಂಖ್ಯಾತ ಭಕ್ತರ ಸಂಭ್ರಮಕ್ಕೆ ಕಾರಣವಾಯಿತು.

"2 ವರ್ಷಗಳ ನಂತರ ಜಾತ್ರೆ ನಡೆದಿದೆ"
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ನಾಗರಾಜು ಮಾತನಾಡಿ, "2 ವರ್ಷಗಳ ಹಿಂದೆ ಜಾತ್ರೆ ನಡೆದಿತ್ತು. ನಂತರ ಜಾತ್ರೆಯೂ ಇಲ್ಲದೆ ಬೇರಾವುದೇ ಕಾರ್ಯಕ್ರಮ ದೇವಲಾಯದಿಂದ ಜರುಗಿರಲಿಲ್ಲ. ಆಗಾಗಿ ಇಂದಿನ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಸಹಜವಾಗಿ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಕೆಲವು ನ್ಯೂನ್ಯತೆಗಳು ಉಂಟಾಗಿರಬಹುದು. ಆದರೆ ಇದಾವುದನ್ನು ಲೆಕ್ಕಿಸದೆ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ," ಎಂದರು.
Recommended Video

470 ಚದರ ಅಡಿ ವಿಸ್ತೀರ್ಣದ ತೆಪ್ಪ
ಸುಮಾರು 470 ಚದರ ಅಡಿ ವಿಸ್ತೀರ್ಣದ ಈ ತೆಪ್ಪವನ್ನು ಈಚಲುಮರದಿಂದ ಒಂದು ತಿಂಗಳ ಹಿಂದೆಯೇ ನಿರ್ಮಿಸಲು ಶುರು ಮಾಡಲಾಗುತ್ತದೆ. ಈಚಲು ಮರದ ಅಟ್ಟಣಿಗೆ ಮೇಲೆ ಅರಳಿ ಮತ್ತು ಆಲದ ಮರದ ತುಂಡುಗಳನ್ನು ಅಳವಡಿಸಿ ಸುತ್ತ ಬಿದಿರಿನ ಮೂಲಕ ತಡೆ ನಿರ್ಮಿಸಲಾಗುವುದು. ತೆಪ್ಪದ ಅಟ್ಟಣಿಗೆ ಅಡಿಯಲ್ಲಿ ಸುಮಾರು 40 ಸಾವಿರ ತೆಂಗಿನ ಕಾಯಿಗಳನ್ನು ಕಟ್ಟಲಾಗುವುದು. ಮಧ್ಯದಲ್ಲಿ ನಾಲ್ಕು ಕಂಬಗಳ ಧಾರ ಮಂಟಪ ನಿರ್ಮಿಸಿ ಮಂಟಪದ ನಾಲ್ಕು ಕಂಬಗಳಿಗೆ ನಾಲ್ಕು ಕಳಸ ಮತ್ತು ಮಧ್ಯದಲ್ಲಿ ಒಂದು ಕಳಸವನ್ನು ಅಳವಡಿಸಿ ಬಳಿಕ ಹೂವು, ಮಾವಿನ ಸೊಪ್ಪು, ಬಾಳೆಕಂದು, ಹೊಂಬಾಳೆ ಬಳಸಿಕೊಂಡು ಇಡೀ ತೆಪ್ಪವನ್ನು ಅಲಂಕರಿಸಲಾಗಿತ್ತು. ಜೊತೆಗೆ ಸರ್ವ ಧರ್ಮದ ಸಂಕೇತವಾಗಿ 7 ಬಣ್ಣಗಳ ಧ್ವಜಗಳು ಹಾಗೂ ಧಾರ್ಮಿಕತೆಯ ಸಂಕೇತವಾಗಿ ಕೇಸರಿ ಧ್ವಜವನ್ನು ಅಲಂಕಾರಕ್ಕೆ ಬಳಸಿಕೊಳ್ಳಲಾಗಿತ್ತು. ರಾತ್ರಿಯ ವೇಳೆ ಸುಂದರವಾಗಿ ಕಾಣಲು ವಿದ್ಯುತ್ ದೀಪಗಳನ್ನು ಕೂಡ ತೆಪ್ಪಕ್ಕೆ ಅಳವಡಿಸಲಾಗಿತ್ತು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications