ಅಕ್ರಮ ಆಸ್ತಿ ಗಳಿಕೆ ಆರೋಪ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಮತ್ತೆ ದೂರು
ಚಿಕ್ಕಮಗಳೂರು, ನವೆಂಬರ್, 30: ಶೃಂಗೇರಿ ತಾಲೂಕಿನ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಚಿಕ್ಕಮಗಳೂರು ಲೋಕಾಯುಕ್ತದಲ್ಲಿ ಮತ್ತೆ ದೂರು ದಾಖಲಾಗಿದೆ.
ಕಳೆದ ಎಂಟು ದಿನಗಳ ಹಿಂದೆ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಕೊಪ್ಪ ತಾಲೂಕಿನ ವಿಜಯಾನಂದ ಎಂಬವರು ರಾಜೇಗೌಡ ಅವರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ದೂರು ನೀಡಿದ್ದರು. ಆದರೆ ನೀಡಿದ್ದ ದೂರನ್ನು ಒಂದೇ ವಾರದಲ್ಲಿಯೇ ಹಿಂಪಡೆದಿದ್ದರು. ಇಂದು ಮತ್ತೆ ಚಿಕ್ಕಮಗಳೂರು ಲೋಕಾಯುಕ್ತದಲ್ಲಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಎಂಬುವರು ಶಾಸಕ ರಾಜೇಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಸಕ ರಾಜೇಗೌಡ ಅವರು 2018ರಲ್ಲಿ ನನ್ನ ವಾರ್ಷಿಕ ಆದಾಯ 35 ಲಕ್ಷ ಎಂದು ತೋರಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ: ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯೆ
2022-23ರಲ್ಲಿ 40 ಲಕ್ಷ ಎಂದಿದ್ದಾರೆ. ಆದರೆ ಶಬಾನ ರಂಜಾನ್ ಎಂಬ ಸಂಸ್ಥೆಯ ಮೂಲಕ 123 ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಾರ್ಷಿಕ ಆದಾಯ 35-40 ಲಕ್ಷ ಇರುವಾಗ 123 ಕೋಟಿ ಆಸ್ತಿ ಖರೀದಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಸಮಾವೇಶದ ಉದ್ದೇಶವೇ ನನ್ನ ಟಾರ್ಗೆಟ್
ಇನ್ನು ಶೃಂಗೇರಿಯಲ್ಲಿ ನಡೆದದ್ದು ಬಿಜೆಪಿಯ ಜನಸಂಕಲ್ಪ ಯಾತ್ರೆ ಅಲ್ಲ. ಅದು ನನ್ನನ್ನು ಟಾರ್ಗೆಟ್ ಮಾಡಿದ್ದ ಸಮಾವೇಶ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಬಿಜೆಪಿ ಸಮಾವೇಶದ ವಿರುದ್ಧ ವ್ಯಂಗ್ಯವಾಡಿದ್ದರು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ಧ ಶಾಸಕ ಟಿ.ಡಿ.ರಾಜೇಗೌಡ, "ಜನಸಂಕಲ್ಪ ಸಮಾವೇಶದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅದು ನನ್ನ ಟಾರ್ಗೆಟ್ ಮಾಡಿದ್ದ ಸಮಾವೇಶವಾಗಿತ್ತು. ಜೀವರಾಜ್ ಅವರ ಕುಮ್ಮಕ್ಕಿನಿಂದ ಹೀಗೆ ಮಾತನಾಡಿರಬಹುದು ಎಂದು ಭಾವಿಸಿದ್ದೇನೆ" ಎಂದಿದ್ದರು.

ಜೀವರಾಜ್‌ಗೆ ಟಿ.ಡಿ.ರಾಜೇಗೌಡ ಸವಾಲು
ಮುಂದುವರಿದು "ಮುಖ್ಯಮಂತ್ರಿ ಬಸವರಾಜ ಸಿಎಂ ಬೊಮ್ಮಾಯಿಯವರು ಜವಾಬ್ದಾರಿಯಿಂದ ಮಾತನಾಡುತ್ತಾರೆ. ನಾನು ಬಹಳ ಸಲ ನೋಡಿದ್ದೇನೆ. ಆದರೆ ಶೋಭಾ ಕರಂದ್ಲಾಜೆಯವರು ಹಾಗೂ ಉಳಿದವರು ಅವ್ಯವಹಾರ ಆಗೇ ಹೋಗಿದೆ, ಮುಗಿದೆ ಹೋಗಿದೆ ಎಂಬಂರ್ಥದಲ್ಲಿ ಮಾತನಾಡಿದ್ದಾರೆ" ಎಂದು ಅಸಮಾಧಾನ ಹೊರಹಾಕಿದರು. "ನಾನು ರಾಜಕಾರಣಕ್ಕೆ ಬರುವ ಮುನ್ನ ನನ್ನ ಆಸ್ತಿ ಎಷ್ಟಿದೆ, ಜೀವರಾಜ್ ರಾಜಕೀಯಕ್ಕೆ ಬರುವ ಮುನ್ನ ಎಷ್ಟಿತ್ತು?, ಈಗ ಎಷ್ಟಿದೆ? ಎನ್ನುವುದು ಎಲ್ಲವೂ ತನಿಖೆಯಾಗಲಿ. ನಾನು ರಾಜಕಾರಣಕ್ಕೆ ಬಂದ ಮೇಲೆ ಒಂದು ರೂಪಾಯಿ, ಒಂದಿಂಚು ಆಸ್ತಿ ಜಾಸ್ತಿಯಾಗಿದ್ದರೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ ಜೀವರಾಜ್ ನಿವೃತ್ತಿ ಪಡೆಯುತ್ತಾರಾ?" ಎಂದು ಪ್ರಶ್ನಿಸುವ ಮೂಲಕ ಸವಾಲು ಹಾಕಿದ್ದಾರೆ. ಜೊತೆಗೆ ಇನ್ನೊಬ್ಬರ ಮೇಲೆ ಆರೋಪ ಮಾಡುವಾಗ ಸ್ವಲ್ಪವಾದರೂ ಹುರುಳಿರಬೇಕು ಎಂದು ಆಕ್ರೋಶ ಹೊರಹಾಕಿದ್ದರು.