ಚಿಕ್ಕಮಗಳೂರು ಹಿಂದೂ, ಮುಸ್ಲಿಂ ಭೂ ವಿವಾದ; ವಿರೋಧದ ನಡುವೆಯೂ ಸಮೀಕ್ಷೆ
ಚಿಕ್ಕಮಗಳೂರು, ಮಾರ್ಚ್ 30; ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಡಾಮಕಾನ್ ಮಸೀದಿ ಜಾಗ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಸದ್ಯ ಮಸೀದಿ ಇರುವ ಈ ಜಾಗ ಹಿಂದೆ ನಲ್ಲೂರು ಮಠದ ಸ್ವತ್ತಾಗಿತ್ತು ಎನ್ನುವ ಕೂಗು ಬಲವಾಗಿ ಕೇಳಿಬಂದಿದೆ. ಜಾಗದ ಉಮೇದುವಾರಿಕೆಗಾಗಿ ಕೋರ್ಟ್ ಕದ ಕೂಡ ತಟ್ಟಿದ್ದಾರೆ. ಎಸಿ, ಡಿಸಿ ಕೋರ್ಟ್‌ನಲ್ಲಿಯೂ ಜಾಗ ನಮ್ಮದು ಎಂದು ಮಠದ ಮನೆಯವರು ಹೇಳುತ್ತಿದ್ದಾರೆ.
ಈ ಹಿಂದೆ ದಾಖಲೆ ಮೇಲೆ ಇಂಕ್ ಚೆಲ್ಲಿ ತಿರುಚಿದ್ದಾರೆ ಎನ್ನುವ ಆರೋಪ ಮಠದ ಮನೆಯವರದ್ದು. ಸದ್ಯ ಮಸೀದಿ ಇರುವ ಜಾಗ ನಗರಸಭೆಗೂ ಸೇರುತ್ತದೆಯಂತೆ. ಒಂದೆಡೆ ಮಠದ ಮನೆಯವರ ಜಾಗ, ಮತ್ತೊಂದೆಡೆ ನಗರಸಭೆ ಜಾಗವನ್ನು ಮಸೀದಿ ಕಡೆಯವರು ಅತಿಕ್ರಮಣ ಮಾಡಿದ್ದಾರೆಂಬ ಆರೋಪವಿದೆ.
ಈ ಹಿನ್ನೆಲೆ ನಗರಸಭೆ ಸರ್ವೇ ಕಾರ್ಯಕ್ಕೆ ಮುಂದಾಯಿತು. ಆಗ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ವಿರೋಧದ ಮಧ್ಯೆಯೂ ಅಧಿಕಾರಿಗಳು ಸರ್ವೇ ಮಾಡಿ ಮುಗಿಸಿದ್ದಾರೆ. ನೂರಾರು ಜನರು ಪ್ರತಿಭಟನೆ ಮಾಡಿದರೂ ಸರ್ವೇ ಕಾರ್ಯದಿಂದ ನಗರಸಭೆ ಹಿಂದೆ ಸರಿಯಲಿಲ್ಲ. ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಸರ್ವೇ ಕಾರ್ಯ ನಡೆಸಿದರು.
ಸಮೀಕ್ಷೆಗೆ ಆಕ್ರೋಶ ವ್ಯಕ್ತಪಡಿಸಿದ ಬಡಾಮಕಾನ್ ಆಡಳಿತ ಮಂಡಳಿ ಈ ಜಾಗದಲ್ಲಿ ನಾವು ಅನೇಕ ದಶಕಗಳಿಂದ ಇದ್ದೇವೆ. ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಕಂದಾಯ ಕಟ್ಟಿದ್ದೇವೆ. ಒಂದು ವೇಳೆ ನಿಮ್ಮದೇ ಆಸ್ತಿ ಎಂದು ಸವಾಲು ಮಾಡುವುದಿದ್ದರೆ ನ್ಯಾಯಾಲಯದಲ್ಲಿ ಮಾಡಿ ಎಂದರು.

ದಾಖಲೆಗಳನ್ನು ಪರಿಶೀಲನೆ ಮಾಡಿ
ಈ ಜಾಗದ ವಿವಾದದ ಸಂಬಂಧ ಸದ್ಯ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಜಾಗಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ಇದೆ. ಆದರೂ ಜಾಗದ ಸಮೀಕ್ಷೆ ನಡೆಸುತ್ತಿರುವ ಚಿಕ್ಕಮಗಳೂರು ನಗರಸಭೆ ವಿರುದ್ಧ ಮುಸ್ಲಿಂಮರು ಅಕ್ರೋಶ ಹೊರಹಾಕಿದ್ದಾರೆ. ಸರ್ವೇಗೆ ಮನವಿ ಮಾಡಿರುವ ದಿವಾಕರ್ ಎಂಬ ವ್ಯಕ್ತಿ ವಿರುದ್ಧ ತಡೆಯಾಜ್ಞೆ ಇದೆ. ಅವರ ಮನವಿಯಿಂದ ನೀವು ಹೇಗೆ ಸರ್ವೇ ಮಾಡುತ್ತೀರಿ?. ದಬ್ಬಾಳಿಕೆ ನಡೆಸುತ್ತಿದ್ದೀರಾ? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಜಾಗದ ವಿಚಾರದಲ್ಲಿ ಅಧಿಕಾರಿಗಳು ದಾಖಲೆ ಸರಿಯಾಗಿ ದಾಖಲೆ ಪರಿಶೀಲನೆ ನಡೆಸಬೇಕೆಂದು ಆಗ್ರಹ ಮಾಡಿದ್ದಾರೆ.

ಏನಿದು ಜಾಗದ ವಿವಾದ?
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ಇರುವ ಬಡಾಮಕಾನ್ ಭಾಗದ ಜಾಗ ನಲ್ಲೂರು ಮಠದ ಮನೆಯವರು ಹಾಗೂ ಜಾಮಿಯಾ ಮಸೀದಿಯ ನಡುವಿನ ತಿಕ್ಕಾಟ ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದೆ.
ಕಳ ಹಂತದಲ್ಲಿ ತಹಶೀಲ್ದಾರ್, ಎಸಿ, ಡಿಸಿ ಕೋರ್ಟ್‌ಗಳಲ್ಲಿ ನಲ್ಲೂರು ಮಠದ ಮನೆಯವರ ಪರ ಆದೇಶವಾಗಿದೆ. ಇದೀಗ ಜಿಲ್ಲಾ ಕೋರ್ಟ್ ಜಾಗದ ಸರ್ವೆ ಕಾರ್ಯ ನಡೆಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು. ಇದರ ನಡುವೆ ನಗರಸಭೆಗೆ ಸರ್ವೆ ನಡೆಸುವಂತೆ ಮಠದ ಮನೆಯವರ ಆಡಳಿತ ಮಂಡಳಿಯ ದಿವಾಕರ್ ಎನ್ನುವರು ಮನವಿ ಮಾಡಿದರು.
ಒಂದು ಲಕ್ಷ ಚದರ ಅಡಿ ಆಸ್ತಿ ವಿವಾದ ಕೋರ್ಟ್ ಅಂಗದಲ್ಲಿ ಇದ್ದು ನಗರದ ಹೃದಯದ ಭಾಗದಲ್ಲೇ ಇರುವ ಜಾಗ ಇದಾಗಿದೆ. ನ್ಯಾಯಾಲಯದಲ್ಲಿಬಡಾಮಕಾನ್ ಜಾಗದ ಪರವಾಗಿ ಜಾಮಿಯಾ ಮಸೀದಿ ವಕಾಲತ್ತು ವಹಿಸಿದೆ. ಮಠದ ಮನೆಯವರಿಂದ ಜಿಲ್ಲಾ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ.

ಪೊಲೀಸರ ಪ್ರವೇಶ
ನಗರಸಭೆ ಕೈಗೊಂಡಿದ್ದ ಭೂಮಿಯ ಸರ್ವೆ ಕಾರ್ಯಕ್ಕೆ ತೀವ್ರ ಪ್ರತಿರೋಧ ತೋರಿಸಿದ ಜಾಮೀಯಾ ಮಸೀದಿ ಆಡಳಿತ ಸಂಸ್ಥೆ ಈ ಸ್ವತ್ತಿನ ವಿಚಾರ ಹೈಕೋರ್ಟ್‌ನಲ್ಲಿದೆ. ಅದಕ್ಕೆ ಸಂಬಂಧಿಸಿದಂತೆ ತಡಯಾಜ್ಞೆಯೂ ಇದೆ. ಹೀಗಾಗಿ ಈಗ ಅಳತೆ ಮಾಡಬಾರದು ಎಂದು ಜಾಮೀಯಾ ಮಸೀದಿ ಆಡಳಿತ ಸಂಸ್ಥೆ ಕಾರ್ಯದರ್ಶಿ ಮುದಸೀರ್ ಪಾಷಾ, ಇತರರು ಪ್ರತಿರೋಧ ತೋರಿದರು. ಮುಸ್ಲಿಂ ಸಮುದಾಯದ ನಾಸೀರ್, ನಗರಸಭೆ ಸದಸ್ಯ ಶಾಬಾದ್, ಜಂಶೀದ್ ಮೊದಲಾದವರು ಸ್ಥಳದಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು.
ಉಪ ವಿಭಾಗಾಧಿಕಾರಿ ಡಾ. ಎಚ್. ಎಲ್. ನಾಗರಾಜ್, ನಗರಸಭೆ ಆಯುಕ್ತ ಬಿ. ಸಿ. ಬಸವರಾಜು ಇತರರು ಇದ್ದರು. ಸಮೀಕ್ಷೆ ಸ್ಥಳಕ್ಕೆ ಕೊನೆಗೆ ಪೊಲೀಸರು ಸಹ ಬರುವಂತೆ ಆಯಿತು.

ಎರಡು ಸಮುದಾಯಗಳ ಹೋರಾಟ
ಎರಡು ಸಮುದಾಯದ ಮಧ್ಯೆ ಜಾಗಕ್ಕಾಗಿ ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. ಆದರೆ ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಅಂತಿಮವಾಗಿಲ್ಲ. ಎರಡು ಸಮುದಾಯದವರು ಒಂದೊಂದು ದಾಖಲೆ ಇಟ್ಟುಕೊಂಡು ಈ ಜಾಗ ನಮ್ಮದು ಅಂತಿದ್ದಾರೆ. ಈ ಮಧ್ಯೆ ವಿವಾದಿತ ಜಾಗಕ್ಕಾಗಿ ಎರಡು ಸಮುದಾಯದವರು ಹೋರಾಟ ಮಾಡುತ್ತಿರುವಾಗ ನಗರಸಭೆ ಸರ್ವೇ ಕಾರ್ಯಕ್ಕೆ ಮುಂದಾಗಿದೆ. ಜಾಗ ಯಾರದ್ದಾದರೂ ಆಗಲಿ ಆದರೆ ಹಿಜಾಬ್ ಸಂಘರ್ಷ, ಮುಸ್ಲಿಂ ಬ್ಯಾನ್ ಅಭಿಯಾನದ ಮಧ್ಯೆ ಈಗ ಭೂ ವಿವಾದ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications