ಈ ಚುನಾವಣೆಯವರೆಗೂ ಮಾತ್ರ ಯಡಿಯೂರಪ್ಪನ ಮೇಲೆ ಪ್ರೀತಿ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ವ್ಯಂಗ್ಯ
ಬಿಜೆಪಿ ನಾಯಕರು ಯಡಿಯೂರಪ್ಪ ಅವಶ್ಯಕ ಎಂದು ಹೇಳಿ, ಯಡಿಯೂರಪ್ಪ ಅವರ ಬಗ್ಗೆ ಹೊಗಳಿದರು. ಹಾಗಾದರೆ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 28: ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲದ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ತರದಂತೆ, ಅವರ ಭಾವನೆಗೆ ತಕ್ಕಂತೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇ ಗೌಡರು ಮಂಗಳವಾರ ಆರೋಗ್ಯ ತಪಾಸಣೆಗೆ ಹೋಗಿದ್ದಾರೆ. ಅವರು ಬಂದ ಬಳಿಕ ಎಲ್ಲಾ ತೀರ್ಮಾನವಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಹಾಗೂ ಅವಘಡಕ್ಕೆ ಅವಕಾಶವಿಲ್ಲ. ದೇವೇ ಗೌಡರ ಸಲಹೆ ಪಡೆದು ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ರ್ಯಾಲಿಗಳ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ರ್ಯಾಲಿಯಲ್ಲಿ ರಾಜ್ಯಕ್ಕೆ ಏನು ಕೊಡುತ್ತೇವೆ ಎಂದು ಹೇಳಿಲ್ಲ. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರನ್ನು ನೆನಪಿಸಿಕೊಂಡು, ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರು ರಾಜಕೀಯ ಮಾಡುವಾಗ ಇವರು ರಾಜಕೀಯಕ್ಕೆ ಬಂದೇ ಇರಲಿಲ್ಲ. ಓರ್ವ ಪ್ರಧಾನಿ ಯಾರಿಗೆ ಛತ್ರಿ ಹಿಡಿದರು ಹಿಡಿಯಲಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ಚರ್ಚೆ ಮಾಡುತ್ತಾರೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದೇವೆ, ಏನು ಕೊಡುತ್ತೇವೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಮಾತು ಮುಂದುವರಿಸಿದ ಕುಮಾರಸ್ವಾಮಿ, ಬಿಜೆಪಿ ನಾಯಕರು ಯಡಿಯೂರಪ್ಪ ಅವಶ್ಯಕ ಎಂದು ಹೇಳಿ, ಯಡಿಯೂರಪ್ಪ ಅವರ ಬಗ್ಗೆ ಹೊಗಳಿದರು. ಹಾಗಾದರೆ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು. ಯಡಿಯೂರಪ್ಪ ಬಗ್ಗೆ ಅಷ್ಟು ಅನುಕಂಪ ಪ್ರೀತಿ ಇದ್ದಿದ್ದರೆ ಯಾಕೆ ಕೆಳಗೆ ಇಳಿಸಿದ್ದೀರಿ? ಅವರು ಹೇಗೆ ಬಂದರೋ, ಯಾವ ರೀತಿ ಬಂದರೋ, ಕಷ್ಟಪಟ್ಟು ಎರಡು ವರ್ಷ ಮುಖ್ಯಮಂತ್ರಿ ಆದರು, ಆಮೇಲೆ ಅವರನ್ನು ಎರಡು ವರ್ಷ ಹೇಗೆ ನಡೆಸಿಕೊಂಡಿರಿ ಎಂದು ಪ್ರಶ್ನಿಸಿದರು.

ಇನ್ನು ಈಗ ಅವರ ಮೇಲೆ ಪ್ರೀತಿ ಬಂದು, ಆತ್ಮೀಯವಾಗಿ ತಬ್ಬಿ ಕೊಳ್ಳುತ್ತೀರಾ. ಎರಡು ವರ್ಷ ನೀವು ಅವರಿಗೆ ಕೊಟ್ಟಿದ್ದು ಏನು? ಅವರಿಗೆ ಯಾವ ರೀತಿ ಗೌರವ ಕೊಟ್ಟಿದ್ದೀರಾ? ವಯಸ್ಸಿನ ಅಂತರ ಹೇಳಿ, ಅದ್ವಾನಿ, ಮುರುಳಿ ಮನೋಹರ ಜೋಶಿ, ಉಮಭಾರತಿ ಅವರನ್ನು ಮನೆಗೆ ಕಳಿಸಿದ್ದೀರಾ? ಈಗ ಯಡಿಯೂರಪ್ಪ ಅನಿವಾರ್ಯ ಅನಿವಾರ್ಯ ಎಂದು ಯಾಕೆ ಹೇಳುತ್ತಿದ್ದೀರಾ? ಒಂದು ಸಮುದಾಯದ ಮತ ಪಡೆಯಲು ಈ ಚುನಾವಣೆವರೆಗೂ ಮಾತ್ರವ ಯಡಿಯೂರಪ್ಪನ ಮೇಲೆ ಪ್ರೀತಿ ಎಂದು ಬಿಜೆಪಿ ನಾಯಕರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.












Click it and Unblock the Notifications