ಕಾಫಿನಾಡು ಚಿಕ್ಕಮಗಳೂರಿಗೆ ಬಂದ 8 ಲಕ್ಷದ ಹಳ್ಳಿಕಾರ್ ಎತ್ತು

ಚಿಕ್ಕಮಗಳೂರು, ಜನವರಿ 26: ಇಂದಿನ ದಿನಗಳಲ್ಲಿ ಎತ್ತುಗಳನ್ನು ಸಾಕುವುದು ಅಂದ್ರೆ ಮುಖ ತಿರುಗಿಸುವವರೇ ಹೆಚ್ಚು. ರೈತರು ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್, ಇನ್ನಿತರ ಉಪಕರಣಗಳ ಮೊರೆ ಹೋದ ಮೇಲೆ ಎತ್ತುಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ.

ಆದರೆ ಇದರ ನಡುವೆಯೂ ಚಿಕ್ಕಮಗಳೂರಿನಲ್ಲೊಬ್ಬ ರೈತ ಒಂದೇ ಒಂದು ಎತ್ತಿಗೆ ಬರೊಬ್ಬರಿ 8 ಲಕ್ಷ ರೂಪಾಯಿ ನೀಡಿದ್ದು, ಎಲ್ಲರಲ್ಲಿ ಆಶ್ಚರ್ಯ ಮೂಡಿಸುವ ಜೊತೆಗೆ ಶಹಬ್ಬಾಶ್‌ಗಿರಿ ಪಡೆದುಕೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ಮಂಜುನಾಥ್ ಶ್ರೀರಂಗಪಟ್ಟಣ ತಾಲೂಕಿನ ಪಾಲನಹಳ್ಳಿಯ ವಿನು ಎಂಬುವರಿಂದ ಒಂದೇ ಒಂದು ಹಳ್ಳಿಕಾರ್ ತಳಿಯ ಎತ್ತಿಗೆ ಬರೊಬ್ಬರಿ 7.75 ಲಕ್ಷ ರೂ. ಹಣ ನೀಡಿ ತೆಗೆದುಕೊಂಡಿದ್ದಾರೆ. ಅದನ್ನು ತನ್ನೂರಿಗೆ ತೆಗೆದುಕೊಂಡು ಬರುವುದರಲ್ಲಿ 8 ಲಕ್ಷ ಆಗಿದ್ದು, ಈ ಎತ್ತನ್ನು 8 ಲಕ್ಷಕ್ಕೆ ಕೊಂಡಿದ್ದರ ಹಿಂದಿನ ಕಥೆಯೂ ಅಷ್ಟೇ ರೋಚಕವಾಗಿದೆ.

A Chikkamagaluru Farmer Manjunath Bought Rs 8 Lakh Hallikar Ox

ವರ್ಷದಿಂದಲೂ ಎತ್ತು ಕೊಳ್ಳಲು ಪ್ರಯತ್ನ
ಚಿಕ್ಕಮಗಳೂರಿನ ತೇಗೂರು ಗ್ರಾಮದ ಮಂಜುನಾಥ್ ಕಳೆದ 18 ವರ್ಷಗಳಿಂದ ಗ್ರಾಮೀಣ ಕ್ರೀಡೆಯಾದ ಎತ್ತಿನಗಾಡಿ ಓಟದಲ್ಲಿ ಸಾಕಷ್ಟು ಆಸಕ್ತಿ ಇರುವ ರೈತ. ಕೃಷಿ ಚಟುವಟಿಕೆಯ ಜೊತೆಗೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಎತ್ತಿನಗಾಡಿ ಸ್ಪರ್ಧೆ ಎಲ್ಲಿ ನಡೆದರೂ, ಆ ಸ್ಪರ್ಧೆಯಲ್ಲಿ ಮಂಜುನಾಥ್ ಭಾಗವಹಿಸುತ್ತಿದ್ದರು.

ಈ ವೇಳೆ ಈ ಗಗನ್ ಎಂದು ಕರೆಸಿಕೊಳ್ಳುವ ಎತ್ತನ್ನು ನೋಡಿದ್ದರು. ಆಗಿನಿಂದಲೇ ಈ ಎತ್ತನ್ನು ತಗೆದುಕೊಳ್ಳಬೇಕು ಎಂದು ಆಸೆಯಾಗಿತ್ತು. ಚಿಕ್ಕಮಗಳೂರಿನ ಕೆಂಪನಹಳ್ಳಿಯ ಹುಲಿಯಪ್ಪಣ್ಣ ಎಂಬ ರೈತರ ಮನೆಯಲ್ಲಿ ಈ ಎತ್ತನ್ನು ಸಾಕಲಾಗಿತ್ತು. ಆ ವೇಳೆ ಇದನ್ನು 4 ಲಕ್ಷಕ್ಕೆ ವ್ಯಾಪಾರ ಮಾಡಿ ತೆಗೆದುಕೊಳ್ಳಲು ತೀರ್ಮಾನಿಸಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಆಸೆ ಕೈಗೂಡಿರಲಿಲ್ಲ. ಆಗಿನಿಂದಲೂ ಈ ಎತ್ತಿನ ಮೇಲಿನ ಪ್ರೀತಿಯನ್ನು ಬಿಡದ ಮಂಜುನಾಥ್ ಈಗ 8 ಲಕ್ಷಕ್ಕೆ ಈ ಎತ್ತನ್ನು ತೆಗೆದುಕೊಂಡು ಬಂದಿದ್ದಾರೆ.

A Chikkamagaluru Farmer Manjunath Bought Rs 8 Lakh Hallikar Ox

ದಾಖಲೆ ಬೆಲೆಗೆ ಹಳ್ಳಿಕಾರ್ ತಳಿ ಮಾರಾಟ
ಸ್ಥಳೀಯರ ಪ್ರಕಾರ ಒಂದು ಹಳ್ಳಿಕಾರ್ ತಳಿ ಎತ್ತು 7.75 ಲಕ್ಷಕ್ಕೆ ಮಾರಾಟವಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಹಳ್ಳಿಕಾರ್ ತಳಿಗೆ ಉತ್ತಮ ಬೇಡಿಕೆ ಇದ್ದು, ಈ ಹಿನ್ನೆಲೆಯಲ್ಲಿ ಇದನ್ನು ಕೊಂಡು ತರಲಾಗಿದೆ. ಆದರೆ ಇಡೀ ರಾಜ್ಯದಲ್ಲಿ ಇದೇ ಮೊದಲು ಬಾರಿಗೆ ಒಂದೇ ಎತ್ತಿಗೆ ಇಷ್ಟೊಂದು ಹಣ ನೀಡಿ ರೈತರೊಬ್ಬರು ಕೊಂಡಿರುವುದು ದಾಖಲೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆರತಿ ಬೆಳಗಿ ಎತ್ತನ್ನು ಪೂಜಿಸಿದ ಗ್ರಾಮಸ್ಥರು
ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಅತಿ ಹೆಚ್ಚು ಕೃಷಿ ಅವಲಂಬಿತ ಕುಟುಂಬಗಳು ಇದ್ದು. ಈ ಗ್ರಾಮದಲ್ಲಿ ಪ್ರತಿ ವರ್ಷವೂ ಸಹ ರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಗ್ರಾಮಸ್ಥರು ಸಹ ಈ ಸ್ಪರ್ಧೆಯನ್ನು ಹಬ್ಬದ ರೀತಿ ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮೂರಿಗೆ ಇಂತಹ ಎತ್ತು ತಂದಿರುವುದು ಗ್ರಾಮಸ್ಥರ ಸಂತಸಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎತ್ತಿಗೆ ಆರತಿ ಬೆಳಗಿ, ಪೂಜಿಸಿ ಹಾರೈಸಿದ್ದಾರೆ. ಯುವಕರಂತೂ ಈ ಎತ್ತನ್ನು ಕಂಡು ರೊಮಾಂಚನಗೊಂಡಿದ್ದು, ಮುಂದಿನ ಸ್ಪರ್ಧೆಯಲ್ಲಿ ಈ ಎತ್ತಿನ ಓಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

A Chikkamagaluru Farmer Manjunath Bought Rs 8 Lakh Hallikar Ox

ಸ್ಪರ್ಧೆಗೆ ಗಗನ್ ಎತ್ತಿನ ತಯಾರಿ
ಎತ್ತಿನಗಾಡಿ ಸ್ಪರ್ಧೆಗೆ ಗಗನ್ ತಯಾರಿ ಈಗಾಗಲೇ ಆರಂಭವಾಗಿದೆ. ಇನ್ನೇನು ಸುಗ್ಗಿಯ ಕಾಲ ಮುಗಿದಿದ್ದು, ರಾಜ್ಯದೆಲ್ಲೆಡೆ ಎತ್ತಿನಗಾಡಿ ಓಟದ ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಎತ್ತನ್ನು ತಯಾರು ಮಾಡಲಾಗುತ್ತಿದೆ. ದಿನಂಪ್ರತಿ ಹಾಲು, ಮೊಟ್ಟೆ, ಉರುಳಿಕಾಳು ಸೇರಿದಂತೆ ಪೋಷಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದೆ.

ಎರಡು ದಿನಕ್ಕೊಮ್ಮೆ ಈಜು, ಪ್ರತಿದಿನ ವಾಕಿಂಗ್ ಸೇರಿದಂತೆ ಓಟದ ಆಯಾಮಗಳನ್ನು ಸಹ ಕರಗತ ಮಾಡಿಸಲಾಗುತ್ತಿದ್ದು, ಈ ಎತ್ತು ಕಾಫಿನಾಡಿನ ಕೀರ್ತಿಯನ್ನು ಓಟದ ಸ್ಪರ್ಧೆಯಲ್ಲಿ ಮುಂದಿನ ದಿನಗಳಲ್ಲಿ ಎತ್ತಿ ಹಿಡಿಯಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+