ಕಂದಾಯ ಇಲಾಖೆ ವಿರುದ್ಧ ಮರ ಸುತ್ತಿ ಪ್ರತಿಭಟಿಸಿದ ರೈತ ಮುಖಂಡ
ಚಿಕ್ಕಮಗಳೂರು, ಜನವರಿ 05: ಪಹಣಿ ದೋಷ ನಿವಾರಣೆಗೆ ಸತಾಯಿಸುತ್ತಿರುವ ಕಂದಾಯ ಇಲಾಖೆ ವಿರುದ್ಧ ರೈತ ಮುಖಂಡ ಮಂಜುನಾಥ್ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿಯ ಮರ ಸುತ್ತುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಪಹಣಿ ದೋಷ ನಿವಾರಣೆ ಹಾಗೂ ತಿದ್ದುಪಡಿ ಮಾಡದೆ ಕಂದಾಯ ಇಲಾಖೆ ಸಿಬ್ಬಂದಿ ಸತಾಯಿಸುತ್ತಿರುವುದನ್ನು ಖಂಡಿಸಿ ರೈತ ಸಂಘದ ಅಧ್ಯಕ್ಷ ಮಂಜುನಾಥ್ ಮರ ಸುತ್ತುವ ಮೂಲಕ ಪ್ರತಿಭಟಿಸಿದರು.

ಅಧಿಕಾರಿಗಳ ಚಾಟಿ ರೈತರ ಮೇಲೆ ಎಂದು ಬರೆದಿರುವ ಪೋಸ್ಟರ್ ಅನ್ನು ಮೈಗೆ ಕಟ್ಟಿಕೊಂಡು ಸರ್ಕಾರದ ಗಮನ ಸೆಳೆಯುವ ರೀತಿಯಲ್ಲಿ ವಿಭಿನ್ನ ಪ್ರತಿಭಟನೆ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಯವರಿಗೆ ಬೆಲೆ ಇಲ್ಲದಂತಾಗಿದೆ. ಕಛೇರಿಯ ಸಿಬ್ಬಂದಿಗಳೇ ಇಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿ ಚಲನೆ ಇಲ್ಲದ ಸ್ಥಿತಿಯಲ್ಲಿದ್ದು, ಮರ ಸುತ್ತಿದರೆ ಏನು ಪ್ರಯೋಜನ ಆಗುವುದಿಲ್ಲವೋ ಅದೇ ರೀತಿಯಲ್ಲಿ ಡಿಸಿ ಕಚೇರಿ ಸುತ್ತಿದರೂ ಪ್ರಯೋಜನ ಇಲ್ಲದಂತಾಗಿದೆ ಎಂದರು.
ಪಹಣಿಯಲ್ಲಿನ ದೋಷ ನಿವಾರಣೆಗೆ ಪೋಡು ಪ್ರಕರಣಗಳನ್ನು ಅಡ್ಡ ತರುತ್ತಿದ್ದಾರೆ. ಇದು ಕಾನೂನು ಬಾಹಿರ ವಾಗಿದ್ದು, ಪಹಣಿ ಪೋಡು ಎರಡಕ್ಕೂ ಒಂದಕ್ಕೊಂದು ಸಂಬಂಧ ಕಲ್ಪಿಸಿ ಹಿಂಬರಹ ಕೊಡುತ್ತಿದ್ದಾರೆ ಎಂದು ರೈತ ಮುಖಂಡ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸೈಕ್ಲೋನ್‌ನಿಂದ ಮಳೆ, ರೈತರು ಕಂಗಾಲು; ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಸೈಕ್ಲೋನ್ ಕಾರಣಕ್ಕೆ ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬಿಸಿಲು ಇಲ್ಲದೇ ಮೋಡ ಕವಿದಿದ್ದು, ಇದರಿಂದಾಗಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಜನ ಜೀವನವು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಇನ್ನು ಮೂರು ದಿನಗಳ ಕಾಲ ಮಳೆ ಜೊತೆಗೆ ತಂಪಾದ ವಾತಾವರಣ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರು.
ಜಿಲ್ಲೆಯ ಮಲೆನಾಡು ಭಾಗವಾದ ಕೊಟ್ಟಿಗೆಹಾರ, ಕಳಸ, ಚಾರ್ಮಾಡಿ ಘಾಟ್‌ನಲ್ಲಿ ಮಳೆಯಾಗುತ್ತಿದ್ದು, ಇತ್ತ ಮಳೆಗೆ ಕಾಫಿಗಿಡದಿಂದ ಕಾಫಿಬೀಜಗಳು ಉದುರುತ್ತಿವೆ. ಒಂದೇ ದಿನದ ಮಳೆಗೆ ಆಪಾರ ಪ್ರಮಾಣದ ಕಾಫಿಗೆ ಹಾನಿಉಂಟಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಜಾವಳಿ ಮೂಡಿಗೆರೆಯಲ್ಲಿ ಮಳೆಗೆ ಕಾಫಿ ಬೆಳೆ ಹಾನಿಯಾಗಿದೆ. ಸೈಕ್ಲೋನ್ ಪರಿಣಾಮ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲದೆ ಕೆಲವೆಡೆ ಕೊಯ್ಲು ಮಾಡಿದ್ದ ಭತ್ತದ ಬೆಳೆಯೂ ಕೂಡ ಮಳೆಗೆ ಹಾನಿಯಾಗಿದೆ. ರೈತರಿಗೆ ಬರಗಾಲದ ನಡುವೆ ಅಕಾಲಿಕ ಮಳೆ ಆಘಾತ ಉಂಟು ಮಾಡಿದೆ.












Click it and Unblock the Notifications