ಕಾಂಗ್ರೆಸ್ ಪಕ್ಷದಲ್ಲಿ ಜಾತಿ, ಧರ್ಮದ ಚೌಕಟ್ಟಿಲ್ಲ: ಬಿಜೆಪಿಗೆ ಕೆ.ಜೆ.ಜಾರ್ಜ್ ತಿರುಗೇಟು
ಚಿಕ್ಕಮಗಳೂರು, ಜೂನ್, 17: ಕಾಂಗ್ರೆಸ್ ಪಕ್ಷಕ್ಕೆ ಜಾತಿ, ಧರ್ಮದ ಚೌಕಟ್ಟಿಲ್ಲ. ಎಲ್ಲಾ ಜಾತಿ, ಜನಾಂಗವನ್ನು ಸಮಾನವಾಗಿ ಕಾಣುತ್ತದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಿಕ್ಕಮಗಳೂರಿನಲ್ಲಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಉದ್ದಗಲಕ್ಕೂ ಎಲ್ಲಾ ಭಾಷಿಗರನ್ನು ಒಳಗೊಂಡಿರುವ ಪಕ್ಷ ಕಾಂಗ್ರೆಸ್. ಹಾಗೆಯೇ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಗೆ ಪುರ್ನಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು ಆಗಿದೆ. ಅಲ್ಲದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.

ರಾಜ್ಯದವರಾದ ಮಲ್ಲಿಕಾರ್ಜುನ್ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇನ್ನು ನೆಹರು ಕುಟುಂಬ ಅಧಿಕಾರಕ್ಕಾಗಿ ಆಸೆ ಪಡದೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಕಾಂಗ್ರೆಸ್‍ನ ಐದು ಗ್ಯಾರಂಟಿಗಳಿಗೆ ಮೂಲ ಕಾರಣ ರಾಹುಲ್ ಗಾಂಧಿ, ಐದು ಗ್ಯಾರೆಂಟಿಯನ್ನು ನಾವು ಯಾರಿಗೆ ಕೊಟ್ಟಿದ್ದೇವೆ, ನಮ್ಮ ರಾಜ್ಯದಲ್ಲಿ ಇರತಕ್ಕಂತ ಮಧ್ಯಮ ವರ್ಗದವರು, ಆರ್ಥಿಕತೆಯಿಂದ ಹಿಂದುಳಿದವರು, ಬಡವರಿಗೆ ಅವರ ಆರ್ಥಿಕ ಪರಿಸ್ಥಿತಿ ಉತ್ತೇಜಿಸುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟಿದೆ ಎಂದರು.
ಐದು ಗ್ಯಾರಂಟಿಗಳಲ್ಲಿ ಬಹುತೇಕ ಮಹಿಳೆಯರಿಗೆ ಉತ್ತಮ ಯೋಜನೆಗಳನ್ನು ರೂಪಿಸಿದೆ. ಇದನ್ನು ಸಹಿಸದ ಬಿಜೆಪಿಗರು ಬಾಯಿ ಬಡಿದು ಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ರಾಷ್ಟ್ರ, ರಾಜ್ಯ, ಜಿಲ್ಲೆ ಒಗ್ಗಟ್ಟಿನ ಮಂತ್ರದಿಂದ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಕಾರ್ಯಕರ್ತರು ಎಲ್ಲಾ ಶಾಸಕರಿಗೆ ಶಕ್ತಿ ಕೊಡುವ ಕಾರ್ಯವನ್ನು ಮಾಡಬೇಕು. ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಜನ, ಶಾಸಕರು ಒಗ್ಗಟ್ಟಾಗಿ ಉಸ್ತುವಾರಿ ಸಚಿವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಶಾಸಕರಾದ ಎಚ್.ಡಿ.ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್, ಮಾಜಿ ಅಧ್ಯಕ್ಷ ಡಾ.ಡಿ.ಎಲ್.ವಿಜಯ್ ಕುಮಾರ್, ಎಂ.ಎಲ್.ಮೂರ್ತಿ, ಕೆಪಿಸಿಸಿ ವಕ್ತಾರ ಎಚ್. ಎಚ್. ದೇವರಾಜ್, ಎ.ಎನ್. ಮಹೇಶ್, ರೇಖಾಹುಲಿಯಪ್ಪಗೌಡ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.












Click it and Unblock the Notifications