ಸಿ.ಟಿ.ರವಿ ವಿರುದ್ಧ ಅಪಪ್ರಚಾರ ಪೋಸ್ಟ್ ಪ್ರಕರಣ: ಮೂವರ ವಿರುದ್ದ ಎಫ್.ಐ.ಆರ್ ದಾಖಲು
ಚಿಕ್ಕಮಗಳೂರು, ಏಪ್ರಿಲ್, 04: ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಹಬ್ಬಿಸಿದ ಪ್ರಕರಣ ಸಂಬಂಧ ಜಿಲ್ಲಾ ಎಸ್‌ಪಿಗೆ ದೂರು ಸಲ್ಲಿಸಿದ್ದೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹರೀಶ್ ಕೆಂಗಳಹಳ್ಳಿ, ಗುರುಪಾಟೀಲ್, ಸುವರ್ಣಗಿರಿ ಕುಮಾರ್ ಎಂಬವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ನಕಲಿ ಸುದ್ದಿ ಸೃಷ್ಟಿ
ಹರೀಶ್ ಕೆಂಗಳಹಳ್ಳಿ ಕಾಂಗ್ರೆಸ್ ಐಟಿ ಸೆಲ್‍ನ ಕಾರ್ಯದರ್ಶಿ ಆಗಿದ್ದು, ಗುರುಪಾಟೀಲ್ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದಾನೆ. ಸುವರ್ಣಗಿರಿ ಕುಮಾರ್ ಎಂಬಾತ ಕಾಂಗ್ರೆಸ್‍ನ ಕಾರ್ಯದರ್ಶಿ ಆಗಿದ್ದು, ಈ ಮೂವರು ಆರೋಪಿಗಳು ಸಿ.ಟಿ.ರವಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಶಾಸಕ ಸಿ.ಟಿ.ರವಿ ಅವರು ಲಿಂಗಾಯತ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಪತ್ರಿಕೆಯಲ್ಲಿ ವರದಿ ಬಂದಿರುವಂತೆ ನಕಲಿ ಸುದ್ದಿಯನ್ನು ಸೃಷ್ಟಿಸಿ ಅಪಪ್ರಚಾರ ಮಾಡಿದ್ದರು.
ಸಿ.ಟಿ.ರವಿಯವರನ್ನು ಮಣಿಸಲು ಸಾಧ್ಯವಿಲ್ಲ
ಇದೀಗ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಶಾಸಕ ಸಿ.ಟಿ.ರವಿ ಅವರು ಲಿಂಗಾಯತ ಸಮುದಾಯದ ವಿರುದ್ಧ ನೀಡಿದ್ದಾರೆಂಬ ಹೇಳಿಕೆ ಸುಳ್ಳು ಎಂಬುದನ್ನು ರುಜುವಾತು ಮಾಡಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಡ್ಡದಾರಿಯನ್ನು ಹಿಡಿದಿದೆ. ಜಾತಿ-ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಸಿ.ಟಿ.ರವಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂದರು.
ಶಾಸಕ ಸಿ.ಟಿ.ರವಿ ಅವರು ಜಿಲ್ಲೆಯ ಅಭಿವೃದ್ಧಿಗೆ ವ್ಯಾಪಕ ಕೊಡುಗೆಗಳನ್ನು ನೀಡಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್ ಮುಖಂಡರನ್ನು ಸಾಕಷ್ಟು ಬಾರಿ ಬಹಿರಂಗ ಚರ್ಚೆಗೆ ಆಹ್ವಾನಿಸಿದರೂ ಅವರು ಚರ್ಚೆಗೆ ಬರಲಿಲ್ಲ. ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ನೈತಿಕತೆ ಇಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಚುನಾವಣೆ ಗೆಲ್ಲಲು ಅಡ್ಡದಾರಿಯನ್ನು ಹಿಡಿದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ನಂಬಿಕೆ ಇಟ್ಟಿರುವಂತಹ ಪಕ್ಷವಾಗಿದೆ. ಲಿಂಗಾಯತ ಸಮುದಾಯ ಇಂತಹ ಸುಳ್ಳು ಸುದ್ಧಿಗೆ ಬೆಲೆ ಕೊಡುವುದಿಲ್ಲ. ಜಾತಿ-ಜಾತಿಗಳ ನಡುವೆ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತಿ ಗೆಲುವು ಸಾಧಿಸುವ ಹುನ್ನಾರ ನಡೆಸುತ್ತಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳನ್ನು ಪಡೆಯುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಹಾಗೆಯೇ ಅಭಿವೃದ್ಧಿ ಮತ್ತು ಸಾಮರಸ್ಯ ಸಿ.ಟಿ.ರವಿಯವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪುಷ್ಪರಾಜ್, ಕೆ.ಪಿ.ವೆಂಕಟೇಶ್, ಬೀಕನಹಳ್ಳಿ ಸೋಮಶೇಖರ್, ಕವಿತಾ ಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಟಿ.ರವಿ ಆಕ್ರೋಶ
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದು ಹೇಳಿಕೆ ಸಿದ್ಧವಾಗಿಟ್ಟುಕೊಂಡಿರಬೇಕು. ಸೋತ ತಕ್ಷಣ ಆಯೋಗದ ಮೇಲೆ ದೂರು ಸಲ್ಲಿಸಲು, ನ್ಯಾಯ ಸಮ್ಮತ ಚುನಾವಣೆ ಆಗಿಲ್ಲ ಎನ್ನುವುದು, ಇ.ವಿ.ಎಂ. ಮೇಲೆ ದೂರುವುದು. ಈ ಎಲ್ಲಾ ಹೇಳಿಕೆ ಸಿದ್ಧವಾಗಿಕೊಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ನಾಯಕರ ವಿರುದ್ಧ ಇತ್ತೀಚೆಗಷ್ಟೇ ವ್ಯಂಗ್ಯವಾಡಿದ್ದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ರಣರಂಗದಲ್ಲಿ ಕುರುಕ್ಷೇತ್ರ ಕಾಲದಿಂದಲೂ ನೋಡಿದ್ದೇವೆ. ದುರ್ಯೋಧನನು ಬಂದು ಕೃಷ್ಣನನ್ನು ಭೇಟಿಯಾಗಿದ್ದನು. ದುರ್ಯೋಧನ ಕೃಷ್ಣನನ್ನು ಭೇಟಿಯಾಗಿದ್ದನು, ಅರ್ಜುನ, ದುರ್ಯೋಧನ ಏಕಕಾಲಕ್ಕೆ ಕೃಷ್ಣನ ಬಳಿ ಹೋಗುತ್ತಾರೆ. ಆದರೆ, ಕೃಷ್ಣನ ಒಲವಿದ್ದದ್ದು ಪಾಂಡವರ ಪರ ಕೌರವರ ಪರವಾಗಿ ಅಲ್ಲ ಎಂದು ಮಹಾಭಾರತದ ಕಥೆಯ ಮೂಲಕ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ್ದರು.
ಮಾತು ಮುಂದುವರಿಸಿದ ಸಿ.ಟಿ ರವಿ, ಕುರುಕ್ಷೇತ್ರ ಫಲಿತಾಂಶ ಕೌರವರ ನಾಶ ಪಾಂಡವರ ಜಯ. ಎಲ್ಲವೂ ಆ ಕಾಲದಿಂದಲೂ ನಡೆದದ್ದೇ ಹೊಸದೇನು ಇಲ್ಲ. ಕೃಷ್ಣನ ಆಶೀರ್ವಾದ ಪಾಂಡವರ ಪರ ಜನರ ಆಶೀರ್ವಾದ ಬಿಜೆಪಿ ಪರ ಎಂದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications