ವಿಧಾನ ಪರಿಷತ್ ಚುನಾವಣೆ 2021ರ ಮರು ಮತ ಎಣಿಕೆ: ಬಿಜೆಪಿ ನಾಯಕರಿಗೆ ಢವ ಢವ
ಚಿಕ್ಕಮಗಳೂರು, ಫೆಬ್ರವರಿ 27: ಬಿಜೆಪಿ ನಾಯಕ, ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್‌ಗೆ ಸಂಕಷ್ಟ ಎದುರಾಗಿದೆ. ವಿಧಾನ ಪರಿಷತ್ ಚುನಾವಣೆಯ ಮರು ಮತಗಳ ಎಣಿಕೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ 2021ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೆ ಪ್ರಾಣೇಶ್ 6 ಮತಗಳ ಅಂತರದಿಂದ ಜಯಗಳಿಸಿದ್ದರು.
ಎಂ. ಕೆ. ಪ್ರಾಣೇಶ್ ವಿರುದ್ಧ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎ. ವಿ. ಗಾಯತ್ರಿ ಶಾಂತೇಗೌಡ ಮರು ಮತ ಎಣಿಕೆಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಜನವರಿ 29ರಂದು ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಕೋರ್ಟ್ ಸರ್ಕಾರದ 12 ನಾಮ ನಿರ್ದೇಶಿತರ ಮತಗಳನ್ನು ಹೊರತುಪಡಿಸಿ ಉಳಿದ ಮತಗಳ ಮರು ಎಣಿಕೆಯನ್ನು ಮಾರ್ಚ್ 7ರೊಳಗೆ ಮಾಡಬೇಕು, ವರದಿಯನ್ನು ಕೋರ್ಟ್‌ಗೆ ನೀಡಬೇಕು ಎಂದು ಸೂಚನೆ ನೀಡಿತ್ತು.

ಮರು ಮತ ಎಣಿಕೆಗೆ ದಿನಾಂಕ ನಿಗದಿ: ಫೆಬ್ರವರಿ 28ರ ಶುಕ್ರವಾರ 2021ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆಗೆ ದಿನಾಂಕವನ್ನು ನಿಗದಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶವನ್ನು ಹೊರಡಿಸಿದ್ದಾರೆ. ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರು ಮತ ಎಣಿಕೆ ನಡೆಯಲಿದೆ.
ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಪ್ರಾಧಿಕಾರಿಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ-2021ರ ಮರು ಮತ ಎಣಿಕೆ ಹಿನ್ನೆಲೆಯಲ್ಲಿ ಕಾಲೇಜಿನ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. ಮರು ಮತ ಎಣಿಕೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 163ರ ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ದಿನಾಂಕ 28.02.2025 ರಂದು ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ ಕಾಲೇಜಿನಲ್ಲಿ ನಡೆಯಲಿರುವ ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ -2021ರ ಮರು ಮತ ಎಣಿಕೆ ಕಾರ್ಯದ ಪ್ರಯುಕ್ತ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ದಿನಾಂಕ 28.02.2025ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮತ ಎಣಿಕೆ ಕೇಂದ್ರ ಮತ್ತು ಅದರ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಎಂ. ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್‌ನಿಂದ ಎ. ವಿ. ಗಾಯತ್ರಿ ಶಾಂತೇಗೌಡ ಅಭ್ಯರ್ಥಿಗಳಾಗಿದ್ದರು. ಚುನಾವಣೆಯಲ್ಲಿ ಎಂ. ಕೆ. ಪ್ರಾಣೇಶ್ 6 ಮತಗಳ ಅಂತರದಲ್ಲಿ ಜಯಗಳಿಸಿದ್ದರು. 2022ರಲ್ಲಿ ಅವರು ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ಒಂದು ವೇಳೆ ಮರು ಮತ ಎಣಿಕೆಯಲ್ಲಿ ಬಿಜೆಪಿಯ ಎಂ. ಕೆ. ಪ್ರಾಣೇಶ್ ಸೋತರೆ ಅವರು ಮುಂದೆ ಕಾನೂನು ಹೋರಾಟ ನಡೆಸಬಹುದು. ಕಾಂಗ್ರೆಸ್‌ನ ಎ. ವಿ. ಗಾಯತ್ರಿ ಶಾಂತೇಗೌಡ ಜಯಗಳಿಸಿದರೆ ಅವರನ್ನು ವಿಧಾನ ಪರಿಷತ್ ಸದಸ್ಯರು ಎಂದು ಘೋಷಣೆ ಮಾಡಲಾಗುತ್ತದೆಯೇ? ಎಂಬುದು ಕೋರ್ಟ್ ಆದೇಶದ ಮೇಲೆ ನಿರ್ಧಾರವಾಗಲಿದೆ.
ಮಾಹಿತಿಗಳ ಪ್ರಕಾರ ಮರು ಮತ ಎಣಿಕೆಯಲ್ಲಿ ಎ. ವಿ. ಗಾಯತ್ರಿ ಶಾಂತೇಗೌಡ ಜಯಗಳಿಸಿದರೆ ಎಂ. ಕೆ. ಪ್ರಾಣೇಶ್ ಕರ್ನಾಟಕ ಹೈಕೋರ್ಟ್ ಆದೇಶದ ಕುರಿತು ಕಾನೂನು ಹೋರಾಟವನ್ನು ಸುಪ್ರೀಂಕೋರ್ಟ್‌ನಲ್ಲಿ ಮುಂದುವರೆಸಬಹುದು. ಶುಕ್ರವಾರ ನಡೆಯುವ ಮರು ಮತ ಎಣಿಕೆಯ ಮೇಲೆ ಬಿಜೆಪಿ, ಕಾಂಗ್ರೆಸ್ ನಾಯಕರು ಕಣ್ಣಿಟ್ಟಿದ್ದಾರೆ.












Click it and Unblock the Notifications