ಚಿಕ್ಕಮಗಳೂರಿನಲ್ಲಿ ದನಗಳ ಸಾವಿಗೆ ಕಾರಣವಾದ ಪಂಚರತ್ನ ಯಾತ್ರೆ: ರೈತರ ಆಕ್ರೋಶ
ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮದ ಬಳಿಕ ಉಳಿದಿದ್ದ ಅನ್ನವನ್ನು ತಿಂದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು, ಫೆಬ್ರವರಿ 28: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮದ ಬಳಿಕ ಉಳಿದಿದ್ದ ಅನ್ನವನ್ನು ತಿಂದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ಶೃಂಗೇರಿ ತಾಲೂಕಿನ ವೈಕುಂಠಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ತಮ್ಮ ನಾಯಕರಿಗಾಗಿ ಸಕಲ ವ್ಯವಸ್ಥೆ ಮಾಡಿದ್ದು, ಕಾರ್ಯರ್ತರು ಹಾಗೂ ಸ್ಥಳೀಯರಿಗಾಗಿ 2000 ಜನರಿಗೆ ಭೋಜನದ ವ್ಯವಸ್ಥೆ ಮಾಡಿದ್ದರು.

ಆದರೆ 1, 000 ಜನ ಮಾತ್ರ ಊಟ ಮಾಡಿದ್ದು, ಉಳಿದ ಆಹಾರ ಹಾಗೂ ಪ್ಲಾಸ್ಟಿಕ್‌ಗಳನ್ನು ಕಾರ್ಯಕ್ರಮದ ಆಯೋಜನಕರು ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು. ಈ ತ್ಯಾಜ್ಯವನ್ನು ತಿಂದ ಎರಡು ಹಸುಗಳು ಸಾವನ್ನಪ್ಪಿವೆ.
ಬೆಳಗ್ಗೆ ಮೇವಿಗೆ ಹೋಗಿದ್ದ ರಾಸುಗಳು ಸಂಜೆ ಮನೆಗೆ ಬಂದ ಬಳಿಕ ಹೊಟ್ಟೆ ಉಬ್ಬರಿಸಿಕೊಂಡು ಬೆಳಗಾಗುವುದರಲ್ಲಿ ಎರಡು ಹಸುಗಳು ಸಾವನ್ನಪ್ಪಿವೆ. ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಹಸುಗಳು ಸಾವನ್ನಪ್ಪಿರುವುದರಿಂದ ಸಂಕಷ್ಟಕ್ಕರ ಸಿಲುಕಿದ್ದು, ಪಂಚರತ್ನ ಯಾತ್ರೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬದುಕಿಗೆ ಅನಿವಾರ್ಯವಾಗಿದ್ದ ರಾಸುಗಳು ಸಾವನ್ನಪ್ಪಿವೆ. ಅದಕ್ಕೆ ಜವಾಬ್ದಾರಿ ಯಾರೆಂದು ಜೆಡಿಎಸ್ ವಿರುದ್ಧ ರೈತರು ಕಿಡಿಕಾರಿದ್ದಾರೆ.

ಪಂಚರತ್ನ ಯಾತ್ರೆಯ ಬ್ಯಾನರ್ ಹರಿದ ಕಿಡಿಗೇಡಿಗಳು
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಕೈಗೊಂಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ದೇವನೂರು ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಕಾರ್ಯಕರ್ತರು ಅದ್ಧೂರಿಯಾಗಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಿಕೊಂಡಿದ್ದಾರೆ.
ಇನ್ನು ಚಿಕ್ಕಮಗಳೂರು ನಗರದಲ್ಲಿ ಪಂಚರತ್ನ ಯಾತ್ರೆಗೆ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದ್ದು, ಈ ಮಧ್ಯೆ ಕಿಡಿಗೇಡಿಗಳು ಪಂಚರತ್ನ ಯಾತ್ರೆಯನ್ನು ಹರಿದು ಹಾಕಿರುವ ಘಟನೆ ಕೂಡ ನಡೆದಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ರನ್ನು ಕಿಡಿಗೇಡಿಗಳು ಬ್ಲೇಡ್ ಬಳಸಿ ಹರಿದು ಹಾಕಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಆರೋಪಿಗಳನ್ನು ಬಂಧಿಸುವಂತೆ ಸ್ಥಳೀಯ ಪೊಲೀಸರಿಗೆ ಆಗ್ರಹಿಸಿದ್ದಾರೆ.












Click it and Unblock the Notifications