ಚೆಕ್ ಬೌನ್ಸ್ ಪ್ರಕರಣ : ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಚಿಕ್ಕಮಗಳೂರು, ಮಾರ್ಚ್ 30: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಅಲ್ಲದೇ ಶಾಸಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಚಿಕ್ಕಮಗಳೂರು ಎಸ್‌ಪಿಗೆ ನೋಟಿಸ್ ನೀಡಿದೆ.
ಶಾಸಕ ಕುಮಾರಸ್ವಾಮಿ ವಿರುದ್ಧ ಚಿಕ್ಕಮಗಳೂರು ಮೂಲದ ಹೂವಪ್ಪಗೌಡ 8 ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಸಾಲದ ರೂಪದಲ್ಲಿ ಹಣ ಪಡೆದು ವಂಚನೆ ಮಾಡಿರುವುದಾಗಿ ಹೂವಪ್ಪ ಗೌಡ ದೂರು ನೀಡಿದ್ದರು. ಕಳೆದ ಮೂರು ವರ್ಷದಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಈ ಹಿಂದೆ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು ಎಂಟು ಪ್ರಕರಣಗಳಲ್ಲಿ 1 ಕೋಟಿ 38 ಲಕ್ಷದ 65 ಸಾವಿರ ರೂಪಾಯಿ ಪಾವತಿಸುವಂತೆ ಸೂಚಿಸಿತ್ತು. ಇಲ್ಲವಾದರೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿತ್ತು. ಆದರೆ 30 ದಿನದ ಒಳಗೆ ಹಣ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಚಿಕ್ಕಮಗಳೂರು ಎಸ್‌ಪಿ ಉಮಾ ಪ್ರಶಾಂತ್‌ಗೆ ಬಿಜೆಪಿ ಶಾಸಕ ಕುಮಾರಸ್ವಾಮಿಯನ್ನು ಬಂಧಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ನೀಡಿದೆ.
ನೀತಿ ಸಂಹಿತೆ ಉಲ್ಲಂಘಿಸಿದ ಎಂ.ಪಿ.ಕುಮಾರಸ್ವಾಮಿ
ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಒಂದಾದ ಮೇಲೆ ಒಂದು ಸಂಕಷ್ಟ ಎದುರಾಗುತ್ತಿದ್ದು, ಈ ಬಾರಿ ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಚಿಕ್ಕಮಗಳೂರು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಾಸಕರ ವಿರುದ್ಧ ನಾನ್ ಬೇಲೇಬಲ್ ವಾರಂಟ್ ಜಾರಿಯಾಗಿದ್ದರೆ, ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ಹಿನ್ನೆಲೆ ಬುಧವಾರ (ಮಾರ್ಚ್ 29)ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಆದರೂ ಕೂಡ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಮನೆಯಲ್ಲೇ ಚೆಕ್ ವಿತರಣೆ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಘನೆ ಮಾಡಿದ್ದಾರೆ ಎಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications