"ಲಿಂಗಾಯತ ಸಮುದಾಯದವರಿಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಗೆಲ್ಲಿಸುತ್ತೇವೆ": ತರೀಕೆರೆಯಲ್ಲಿ ಪ್ರತಿಭಟನೆ ಕಿಚ್ಚು
ತರೀಕೆರೆ, ಏಪ್ರಿಲ್, 08: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಚ್ಚಾಟಗಳು ಶುರುವಾಗಿವೆ. ಅದೇ ರೀತಿ ತರೀಕೆರೆಯಲ್ಲಿ ಲಿಂಗಾಯತ ಸಮುದಾಯದ ದೋರನಾಳು ಪರಮೇಶ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿ. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಅಲ್ಲದೇ ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವ ಮೂಲಕ ಲಿಂಗಾಯತ ಸಮುದಾಯದವರಿಗೇ ಟಿಕೆಟ್ ಕೊಡುವಂತೆ ಆಗ್ರಹಿಸಿದರು. ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಾಕಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಇದೇ ವಿಚಾರ ತರೀಕೆರೆ ಕಾಂಗ್ರೆಸ್ ನಾಕಯಕರಿಗೆ ತಲೆನೋವು ತಂದಿಟ್ಟಿದೆ.

ಬಂಡಾಯ ಶಮನಕ್ಕೆ ಕಾಂಗ್ರೆಸ್ ಯತ್ನ
ಕಳೆದ ನಾಲ್ಕೈದು ದಶಕಗಳಿಂದ ದೇವೇಗೌಡರಿಗೆ ಮಾನಸ ಪುತ್ರನಂತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಶಾಸಕ ವೈ.ಎಸ್.ವಿ.ದತ್ತಾ ಜೆಡಿಎಸ್ ಸಖ್ಯ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಕಡೂರು ಕಾಂಗ್ರೆಸ್ ಹಾಗೂ ದತ್ತಾ ಅವರ ಅಭಿಮಾನಿಗಳಿಗೆ ಆನೆ ಬಲ ಬಂದಿತ್ತು.
ಈ ಹಿಂದೆ ಕಾಂಗ್ರೆಸ್ ಪಡಸಾಲೆಯಲ್ಲಿ ವೈ.ಎಸ್.ವಿ.ದತ್ತಾ ಅವರಿಗೆ ಟಿಕೆಟ್ ಎಂದು ಹೇಳಲಾಗ್ತಿತ್ತು. ಆದರೆ, ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ವರಿಷ್ಠರು ಕೆ.ಎಸ್.ಆನಂದ್‍ಗೆ ಮಣಿ ಹಾಕಿದ್ದಾರೆ. ಇದರಿಂದ ದತ್ತಾ ಸೇರಿದಂತೆ ಅವರ ಅಪಾರ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿತ್ತು. ಹೀಗಾಗಿ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ದತ್ತಾ ಕೂಡ ಇದು ಅಭಿಮಾನಿಗಳ ಆತ್ಮಗೌರವ-ಸ್ವಾಭಿಮಾನದ ಪ್ರಶ್ನೆ ಅಂತಾ ಭಾವನಾತ್ಮಕ ಪತ್ರ ಬರೆದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದ್ದರು.
ಇದೀಗ, ವೈ.ಎಸ್.ವಿ.ದತ್ತಾ ಅವರ ಮನೆಗೆ ಭೇಟಿ ನೀಡ್ತಿರೋ ಅಭಿಮಾನಿಗಳು ಕಾಂಗ್ರೆಸ್ ಟಿಕೆಟ್ ಕೊಡದಿದ್ರೆ ಏನಂತೆ. ಬೇಡ. ನೀವು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಿ ನಾವು ಗೆಲ್ಲಿಸ್ತೀವಿ ಅಂತ ಶಪಥಗೈದಿದ್ದಾರೆ. ದತ್ತ ಕೂಡ ಕಡೂರಲ್ಲಿ 300 ಮತ ಹಾಗೂ ಹಣ ಬಲವೂ ಇಲ್ಲದ ಸಣ್ಣ ಜಾತಿ ನಂದು. ಜನ ನನ್ನ 47 ಸಾವಿರ ಮತಗಳ ಅಂತರದಿಂದ ಗೆಲ್ಲಸಿದ್ದರು. ನಾನು ಸೋತಾಗಲೂ ಎರಡನೇ ಸ್ಥಾನದಲ್ಲೇ ಇದ್ದೆ. ಜನ ಹೇಗೆ ಹೇಳುತ್ತಾರೋ ಹಾಗೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ದತ್ತಾ ಅವರ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕಡೂರಿನ ಕಾಂಗ್ರೆಸ್ ಅಭ್ಯರ್ಥಿ ಆನಂದ್, ದತ್ತಾ ಅವರ ಮನೆಗೆ ಭೇಟಿ ನೀಡಿ ಬಂಡಾಯವನ್ನು ಶಮನ ಮಾಡಲು ಮುಂದಾಗಿದ್ದಾರೆ. ಆದರೆ, ವೈ.ಎಸ್.ವಿ.ದತ್ತಾ ಅವರು ಎಲ್ಲವನ್ನೂ ಕಾರ್ಯಕರ್ತರ ಮೇಲೆ ಹಾಕಿ, ನನ್ನದೇನು ಇಲ್ಲ. ನನಗೆ ಅಭಿಮಾನಿಗಳೇ ದೇವರು. ನನ್ನನ್ನ ಬೆಳೆಸಿದ್ದೇ ಅವರು. ಅವರು ಹೇಳಿದಂತೆ, ನಾನು ಮಾಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧದ ಬಂಡಾಯವನ್ನು ಶಮನ ಮಾಡದೇ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಇನ್ನು ಕಡೂರಲ್ಲಿ ದತ್ತ ಅವರ ನಾಯಕತ್ವ, ಜನಬಳಕೆ, ಅಭಿಮಾನಿ ಬಳಗ ಪ್ರಶ್ನಾತೀತ. ಇಡೀ ತಾಲೂಕಿಲ್ಲಿ 300 ಮತವಿರುವ ಸಣ್ಣ ಸಮುದಾಯದ ದತ್ತ ಜಾತ್ಯಾತೀತ ನಾಯಕ. ಅವರು ಸ್ವಂತತ್ರವಾಗಿ ಚುನಾವಣೆ ಮಾಡಿದರೆ ಅದು ಕಾಂಗ್ರೆಸ್‌ಗೆ ಮಗ್ಗಲ ಮುಳ್ಳಾಗೋದು ಗ್ಯಾರಂಟಿ. ಯಾಕೆಂದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಗೆಲುವಿಗೆ ನಂಬಿರುವ ಮುಸ್ಲಿಂ ಮತಗಳು ಕಾಂಗ್ರೆಸ್‌ಗಿಂತ ದತ್ತಾ ಅವರಿಗೆ ಹೆಚ್ಚು ಮತ ಬೀಳುವುದು ಕಟ್ಟಿಟ್ಟ ಬುತ್ತಿಯಾಗಿದೆ.
ಹಾಗಾಗಿ, ಕಾಂಗ್ರೆಸ್ ಕೂಡ ಬಂಡಾಯ ಶಮನಕ್ಕೆ ಹರಸಾಹಸಪಡ್ತಿದೆ. ಈ ಮಧ್ಯೆ ದತ್ತ ಅವರು ಮತ್ತೆ ಜೆಡಿಎಸ್ ಹೋಗುತ್ತಾರೆಂಬ ಮಾತುಗಳು ಕಡೂರಲ್ಲಿ ಜನ ಜನಿತವಾಗಿದೆ. ಆದರೆ, ಎಲ್ಲವನ್ನೂ ಕಾರ್ಯಕರ್ತರ ಮೇಲೆ ಹಾಕಿರುವ ವೈ.ಎಸ್.ವಿ.ದತ್ತಾ ಅವರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಗೊತ್ತಿಲ್ಲ.












Click it and Unblock the Notifications