ಚಿಕ್ಕಮಗಳೂರು; ಅನಧಿಕೃತ ಮೈಕ್ ತೆರವಿಗೆ ಬಜೆಟ್‌ನಲ್ಲಿ ಘೋಷಣೆ
ಚಿಕ್ಕಮಗಳೂರು, ಮಾರ್ಚ್ 27; ಚಿಕ್ಕಮಗಳೂರು ನಗರದಲ್ಲಿ ಅನಧಿಕೃತ ಮೈಕ್‌ಗಳ ತೆರವಿಗೆ ನಗರಸಭೆಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಸಾರ್ವಜನಿಕರ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ನಗರಸಭೆ ಅನುಮತಿ ಪಡೆಯದಿರುವ ಮೈಕ್ ತೆರವಿಗೆ ಘೋಷಣೆ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಮೈಕ್‌ಗಳನ್ನ ತೆಗಿಸಲು ನಗರಸಭೆ ಸಿದ್ಧತೆ ಮಾಡಿಕೊಂಡಿದೆ. ಮಸೀದಿ, ಚರ್ಚ್‌ಗಳಲ್ಲಿ ಅನಧಿಕೃತವಾಗಿ ಹಾಕಿರುವ ಮೈಕ್ ತೆಗೆಯಲಾಗುತ್ತದೆ.
ಉಡುಪಿಯಲ್ಲಿ ಆರಂಭವಾದ ಹಿಜಬ್ ವಿವಾದ ಹಾಗೂ ಮುಸ್ಲಿಂ ಬ್ಯಾನ್ ವಿವಾದ ಈಗ ಇಡೀ ರಾಜ್ಯಕ್ಕೆ ಹಬ್ಬಿದೆ. ಆದರೀಗ, ಆ ಎರಡು ವಿವಾದಗಳ ಜೊತೆ ಮತ್ತೊಂದು ವಿವಾದಕ್ಕೆ ಕಾಫಿನಾಡು ಸಾಕ್ಷಿಯಾಗುತ್ತಾ? ಎಂಬ ಅನುಮಾನ ಉಂಟಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಾರ್ಥನ ಮಂದಿರಗಳ ಮೇಲಿನ ಅಕ್ರಮ ಮೈಕ್ ತೆರವಿಗೆ ಚಿಕ್ಕಮಗಳೂರು ನಗರಸಭೆ ಮುಂದಾಗಿದ್ದು, ಯಾವುದೇ ಧರ್ಮದ ಅಕ್ರಮ ಮೈಕ್‌ಗಳನ್ನು ಬಿಡುವುದಿಲ್ಲ ಎಂದು ಘೋಷಣೆ ಮಾಡಲಾಗಿದೆ.

ಚಿಕ್ಕಮಗಳೂರು ನಗರಸಭೆ ಅವಧಿ ಮುಗಿದು ಮೂರು ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ನಗರಸಭೆಯ ಚುಕ್ಕಾಣಿ ಹಿಡಿದಿತ್ತು. ಶುಕ್ರವಾರ ನಗರಸಭೆ ಬಜೆಟ್ ಮಂಡನೆಯಾಗಿದೆ. ನಗರದಲ್ಲಿ ಅಕ್ರಮವಾಗಿ ಹಾಕಿರುವ ಮೈಕ್‌ಗಳನ್ನು ತೆರವುಗೊಳಿಸುವುದಾಗಿ ನಗರಸಭೆ ಬಜೆಟ್‌ನಲ್ಲಿ ಹೇಳಲಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮಕ್ಕೆ ಸೇರಿದ್ದರೂ ಸರ್ಕಾರದ ಆದೇಶ ಉಲ್ಲಂಘಿಸಿ, ನಗರಸಭೆ ಅನುಮತಿ ಪಡೆಯದಿದ್ದರೆ ಅಂತಹ ಮೈಕ್‌ಗಳನ್ನು ತೆರವುಗೊಳಿಸಲು ನಗರಸಭೆ ಮುಂದಾಗಿದೆ.
ನೋಟಿಸ್ ನೀಡಲಿದೆ; ಈ ಬಗ್ಗೆ ಮಾತನಾಡಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, "ನಗರಸಭೆಗೆ ದೂರುಗಳು ಬಂದಿದೆ. ಕೋರ್ಟ್ ಆದೇಶ ಉಲ್ಲಂಘಿಸಿ ಮೈಕ್‌ಗಳನ್ನು ಕಟ್ಟಿದ್ದಾರೆ. ಇದರಿಂದ ಮಕ್ಕಳು, ವೃದ್ಧರು, ರೋಗಿಗಳಿಗೂ ತೊಂದರೆಯಾಗುತ್ತಿದೆ. ಹಾಗಾಗಿ ನಗರಸಭೆ ಅನುಮತಿ ಪಡೆಯದೆ ಅಕ್ರಮವಾಗಿರುವ ಯಾವುದೇ ಧರ್ಮದ ಮೈಕ್‌ಗಳನ್ನಾದರೂ ತೆರವು ಮಾಡುತ್ತೇವೆ. ನಿಗದಿತ ಸಮಯದಲ್ಲಿ ಅವರು ದಾಖಲೆಗಳನ್ನು ನಗರಸಭೆಗೆ ತಲುಪಿಸಬೇಕು" ಎಂದರು.
ಮುಂದಿನ ದಿನಗಳಲ್ಲಿ ಅಕ್ರಮವಾಗಿ ಮೈಕ್‌ಗಳನ್ನು ಬಳಸುತ್ತಿರುವವರಿಗೆ ನಗರಸಭೆ ನೋಟೀಸ್ ನೀಡಲಿದ್ದು, ನಿಗದಿತ ಕಾಲಮಿತಿಯೊಳಗೆ ತಾವು ಪಡೆದಿರುವ ಅನುಮತಿ ಪತ್ರವನ್ನು ನಗರಸಭೆಗೆ ನೀಡಬೇಕಿದೆ. ನಗರಸಭೆಗೆ ಅನುಮತಿ ಪತ್ರವನ್ನು ನೀಡದಿದ್ದರೆ, ಮೈಕ್‌ಗಳಿಗೆ ಅನುಮತಿ ಪಡೆಯದಿದ್ದರೆ ಅಂತಹಾ ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳಾದರೂ ಮೈಕ್ ತೆರವುಗೊಳಿಸುವುದಾಗಿ ನಗರಸಭೆ ಎಚ್ಚರಿಸಿದೆ.
ಹಲವಾರು ಜನರಿಗೆ ತೊಂದರೆ; ಸ್ಥಳೀಯರು ಕೂಡ ಪ್ರಾರ್ಥನಾ ಮಂದಿರಗಳ ಮೈಕ್ ಹಾವಳಿಯಿಂದ ಬೇಸತ್ತಿದ್ದಾರೆ. ಇಂತಹ ಸಮಯದಲ್ಲಿ ಮೈಕ್‌ಗಳನ್ನು ಬಳಸಬೇಕೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದೆ. 11 ಡೆಸಿಬಲ್ ಒಳಗೆ ಇರಬೇಕು ಎಂದು ಕೋರ್ಟ್ ಹೇಳಿದೆ. ಆದರೆ, ಮೈಕ್‌ಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ. ಮಕ್ಕಳು ಓದುವುದು ಕಷ್ಟವಾಗಿದೆ, ವೃದ್ಧರು-ಮಕ್ಕಳಿಗೂ ಸಮಸ್ಯೆಯಾಗಿದೆ. ಯಾವಾಗ ಬೇಕು ಆವಾಗ ಮೈಕಗಳನ್ನು ಬಳಸುತ್ತಿರುವುದರಿಂದ ಮಾನಸಿಕ ನೆಮ್ಮದಿ ಕೂಡ ಹಾಳಾಗಿದೆ. ಹಾಗಾಗಿ, ಕೋರ್ಟ್ ಆದೇಶದಂತೆ ಮೈಕ್ ಬಳಸುವುದು ಮತ್ತು ಆ ನಿಟ್ಟಿನಲ್ಲಿ ನಗರಸಭೆ ಕೈಗೊಂಡ ಕ್ರಮ ಸ್ವಾಗತಾರ್ಹ ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications