Chikkamagaluru Utsav 2023: ಈ ಬಾರಿಯ ಆಹಾರ ಮೇಳ ಹೇಗಿರಲಿದೆ?, ಇಲ್ಲಿದೆ ವಿವರ
ಚಿಕ್ಕಮಗಳೂರು, ಜನವರಿ, 15: ಸಾರ್ವಜನಿಕರಿಗೆ ಹೆಚ್ಚು ಮನರಂಜನೆ ನೀಡುವುದನ್ನು ಗಮನದಲ್ಲಿಟ್ಟುಕೊಂಡು ಚಿಕ್ಕಮಗಳೂರು ಜಿಲ್ಲಾ ಹಬ್ಬವನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ ಹೇಳಿದ್ದಾರೆ.
ನಗರದ ಚಿಕ್ಕಮಗಳೂರು ಕ್ಲಬ್ ಮುಂಭಾಗ ಚಿಕ್ಕಮಗಳೂರು ಹಬ್ಬದ ಆಹಾರ ಮೇಳದ ಮಳಿಗೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೊನಾದಿಂದಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಬಾರಿ ಸಾರ್ವಜನಿಕರಿಗೆ ಹೆಚ್ಚು ಮನರಂಜನೆ ನೀಡುವುದನ್ನು ಆದ್ಯತೆಯಾಗಿ ಇಟ್ಟುಕೊಂಡು ಜಿಲ್ಲಾ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಬಾರಿಯ ಆಹಾರ ಮೇಳದ ವಿಶೇಷತೆ
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲಾ ಹಬ್ಬದಲ್ಲಿ ಮಲೆನಾಡು, ಬಯಲುಸೀಮೆ ಸೇರಿದಂತೆ ಜಿಲ್ಲೆಯ ವಿವಿಧ ಬಗೆಯ ಖಾದ್ಯಗಳನ್ನು ಆಹಾರ ಮೇಳದಲ್ಲಿ ಪರಿಚಯಿಸಲಾಗುತ್ತಿದೆ ಎಂದರು. ಎಸ್‌ಬಿಎಂ.ನಿಂದ ಕೆಎಸ್‌ಎಫ್‌ಸಿವರೆಗಿನ ರಸ್ತೆಯಲ್ಲಿ ಸುಮಾರು 125 ಆಹಾರ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಎಐಟಿ ಕ್ಯಾಂಪಸ್ ಆವರಣದಲ್ಲಿ 25 ಆಹಾರ ಮಳಿಗೆಗಳನ್ನು ತೆರೆಯಲಾಗುವುದು ಎಂದರು.

ಮಳೆಗೆಗಳಲ್ಲಿ ಏನೆಲ್ಲ ಲಭ್ಯವಿರಲಿದೆ?
ಇನ್ನು ಮಳಿಗೆಗಳಲ್ಲಿ ಆಕರ್ಷಕ ತಿಂಡಿ ತಿನಿಸುಗಳ ಜೊತೆಗೆ ಬಳೆ ತೊಡಿಸುವ, ಟ್ಯಾಟೂ, ಮೆಹಂದಿ ಬಿಡಿಸುವ ಪ್ರದರ್ಶನ ಕೂಡ ಇರಲಿದೆ ಎಂದು ಮಾಹಿತಿ ನೀಡಿದರು. ನಂತರ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲಾ ಉತ್ಸವದಲ್ಲಿ ವೈವಿಧ್ಯಮಯವಾದ ಸಾಂಸ್ಕೃತಿಕ ಚಟುವಟಿಕೆಗಳು, ಜ್ಞಾನ ವೈಭವಕ್ಕೆ ಪೂರಕವಾದ ಆಹಾರ ಮೇಳವನ್ನು ಆಯೋಜಿಸಲಾಗಿದೆ. ದೇಶಿ ಖಾದ್ಯಗಳ ಜೊತೆಗೆ ಮನೆಯ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಉಣಬಡಿಸಬೇಕು ಎಂಬುದು ಉತ್ಸವದ ಸದುದ್ದೇಶವಾಗಿದೆ ಎಂದರು.

ಜನವರಿ 18 ರಿಂದ ಜಿಲ್ಲಾ ಉತ್ಸವ
ಜನವರಿ 18 ರಿಂದ 22ರ ವರೆಗೆ ಜಿಲ್ಲಾ ಉತ್ಸವ ನಡೆಯಲಿದ್ದು, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಎಐಟಿ ಕಾಲೇಜು ಆವರಣದಲ್ಲಿ ಕೃಷಿ ಮತ್ತು ವಸ್ತುಪ್ರದರ್ಶನ 'ಜ್ಞಾನ ವೈಭವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜ್ಞಾನ ವೈಭವ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದರು. ಜ್ಞಾನ ವೈಭವ ಸಜೀವ ಮಾದರಿಗಳ ಸಿದ್ಧತೆ ಈಗಾಗಲೇ ನಡೆಯುತ್ತಿದೆ. ಕೃಷಿ ಮತ್ತು ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ, ಆಕೀರ್ಡ್ ಪ್ರದರ್ಶನ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುವುದು. ಹಾಗೂ ವಿಚಾರ ಗೋಷ್ಟಿಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications