ಚಿಕ್ಕಮಗಳೂರಿನ ಸಾತ್ಕೊಳಿ ದಂಪತಿ ಹತ್ಯೆ ಪ್ರಕರಣದ ಆರೋಪಿ ಬಂಧನ
ಚಿಕ್ಕಮಗಳೂರು, ಸೆಪ್ಟೆಂಬರ್ 1: ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಸಾತ್ಕೊಳಿ ಗ್ರಾಮದಲ್ಲಿ ನಡೆದಿದ್ದ ದಂಪತಿಯ ಭೀಕರ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಯು ಸಾತ್ಕೊಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಧರ್ಮಯ್ಯ- ಭಾರತಿ ಎಂಬಿಬ್ಬರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದ.
ಆರೋಪಿಯ ಹೆಸರು ಗೋವಿಂದ. ಆತನನ್ನು ಎನ್. ಆರ್. ಪುರ ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಯನ್ನು ಹತ್ಯೆ ಮಾಡಿದ ನಂತರ ಆರೋಪಿ ಗೋವಿಂದ ಪರಾರಿಯಾಗಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಇದೀಗ ಆತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಹತ್ಯೆಗೆ ಈಡಾಗಿರುವ ಭಾರತಿಯನ್ನು ದೈಹಿಕ ಸಂಪರ್ಕಕ್ಕಾಗಿ ಗೋವಿಂದ ಪೀಡಿಸುತ್ತಲೇ ಇದ್ದ. ಆಕೆ ನಿರಾಕರಿಸಿದರು ಎಂಬ ಕಾರಣಕ್ಕೆ ಭಾರತಿ ಮತ್ತು ಆಕೆಯ ಪತಿ ಧರ್ಮಯ್ಯ ಅವರನ್ನು ಸಾತ್ಕೊಳಿ ಗ್ರಾಮದಲ್ಲಿ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ, ಆ ನಂತರ ಸ್ಥಳದಿಂದ ಪರಾರಿಯಾಗಿದ್ದ. ಎನ್. ಆರ್. ಪೊಲೀಸರು ಪ್ರಕರಣ ದಾಖಲಿಸಿದ್ದರು.