ವಿಷವಾಗಿ ಕಾಡುತ್ತಿದೆ ಹತ್ತು ವರ್ಷದ ನಂತರ ತುಂಬಿದ ಆರದವಳ್ಳಿ ಕೆರೆ
ಚಿಕ್ಕಮಗಳೂರು, ಡಿಸೆಂಬರ್ 16: ಹತ್ತು ವರ್ಷದ ನಂತರ ತುಂಬಿದ ಕೆರೆಯು, ರಾಸಾಯನಿಕ ಸೇರ್ಪಡೆಯಿಂದ ಮಲಿನವಾಗಿದ್ದು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಚಿಕ್ಕಮಗಳೂರು ತಾಲೂಕಿನ ಆರದವಳ್ಳಿಯಲ್ಲಿ ಈ ಕೆರೆಯಿದೆ. ಕೆಲ ದಿನಗಳ ಹಿಂದೆ ಕೆರೆಯಲ್ಲಿ ಮೀನು ಸಾಕಣೆ ಮಾಡಿ ಮಾರಾಟ ಮಾಡಲು ಗುತ್ತಿಗೆ ಪಡೆದ ಗುತ್ತಿಗೆದಾರ ಮೀನು ಬೆಳವಣಿಗೆಗೋ ಅಥವಾ ಇನ್ನಾವುದೋ ಕಾರಣಕ್ಕೆ ರಾಸಾಯನಿಕ ವಸ್ತು ಹಾಕಿದ ಪರಿಣಾಮ ಕೆರೆ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಗಬ್ಬು ವಾಸನೆ ಬರುತ್ತಿದೆ.
ಕೆರೆಯ ಪಕ್ಕದಲ್ಲಿಯೇ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಯೂ ಇದೆ. ದುರ್ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಮೂಗು ಮುಚ್ಚಿಕೊಂಡು ಆಟ ಆಡುವ ಪರಿಸ್ಥಿತಿ ಎದುರಾಗಿದೆ.

ದನಕರುಗಳು ನೀರು ಕುಡಿಯಲು ಹಿಂದೇಟು: ಈ ಬಾರಿ ಸುರಿದ ಮಳೆಯಿಂದಾಗಿ ಹತ್ತು ವರ್ಷದಿಂದ ತುಂಬದಿದ್ದ ಆರದವಳ್ಳಿ ಕೆರೆ ತುಂಬಿತ್ತು. ಇದರಿಂದ ರೈತರು ದನಕರುಗಳಿಗೆ ಕುಡಿಯಲು ನೀರು ಸಿಕ್ಕಿತು ಎಂದು ಖುಷಿಯಾಗಿದ್ದರು. ಆದರೆ ಕೆರೆಗೆ ರಾಸಾಯನಿಕ ಬೆರೆಸಿರುವ ಕಾರಣ ದನಕರುಗಳು ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಹಳ್ಳಿಯ ಮಹಿಳೆಯರು ಇದೇ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆದರೆ ಕೆರೆ ಹಸಿರು ಬಣ್ಣಕ್ಕೆ ತಿರುಗಿ ವಾಸನೆ ಬರುತ್ತಿರುವುದರಿಂದ ಬಟ್ಟೆ ತೊಳೆಯಲು ಆಗುತ್ತಿಲ್ಲ.

ಕೆರೆಗೆ ರಾಸಾಯನಿಕ ವಸ್ತು ಬೆರೆಸಿರುವುದರಿಂದ ಕೆರೆಯಲ್ಲಿನ ಸಣ್ಣ ಸಣ್ಣ ಮೀನುಗಳ ಜೊತೆಗೆ ಏಡಿ ಸೇರಿದಂತೆ ಹಲವು ಚಲಚರಗಳು ಸಾವನ್ನಪ್ಪಿವೆ. ಕೆರೆಯ ಕೆಟ್ಟ ವಾಸನೆ ಇಡೀ ಗ್ರಾಮವನ್ನೇ ಆವರಿಸಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.












Click it and Unblock the Notifications