ಚಾರ್ಮಾಡಿ ಘಾಟ್ ವಾಹನ ಸಂಚಾರ; ಆದೇಶ ವಾಪಸ್
ಚಿಕ್ಕಮಗಳೂರು, ಮಾರ್ಚ್ 18; ಚಾರ್ಮಾಡಿ ಘಾಟ್ ಮಾರ್ಗದಲ್ಲಿ ದಿನದ 24 ಗಂಟೆ ಲಘು ಹಾಗೂ ಕೆಲವು ವಾಹನಗಳ ಸಂಚಾರಕ್ಕೆ ಬುಧವಾರ ಅನುಮತಿ ನೀಡಲಾಗಿತ್ತು. ಚಿಕ್ಕಮಗಳೂರು ಜಿಲ್ಲಾಡಳಿತ ಈ ಆದೇಶವನ್ನು ವಾಪಸ್ ಪಡೆದಿದ್ದು, ಪುನಃ ಸಂಚಾರ ಬಂದ್ ಆಗಿದೆ.
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಈ ಸಂದರ್ಭದಲ್ಲಿ ವಾಹನಗಳು ಸಂಚರಿಸಿದರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಡ್ಡಿಯಾಗಲಿದೆ.
ವಾಹನಗಳ ದಟ್ಟಣೆ ಉಂಟಾಗಿ ಅಪಘಾತಗಳು ಸಂಭವಿಸುವುದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ.

ಬುಧವಾರ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದ ಆದೇಶ ಗುರುವಾರ ರದ್ದುಗೊಳಿಸಿರುವುದರಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಹೊರಟಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ವಾಹನ ಸಂಚಾರಕ್ಕೆ ಅವಕಾಶವಿದೆ ಎಂದು ಬಂದಿದ್ದೆ. ಲಾರಿ, ಸೇರಿದಂತೆ ಆರು ಚಕ್ರದ ವಾಹನಗಳು ಆದೇಶ ಹಿಂಪಡೆದ ಕಾರಣದಿಂದ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಯಿತು ಎಂದು ಪ್ರಯಾಣಿಕರು ಹೇಳಿದ್ದಾರೆ.
ಬುಧವಾರ ಹೊರಡಿಸಿದ್ದ ಆದೇಶದಂತೆ ಸರ್ಕಾರಿ ಬಸ್, 6 ಚಕ್ರದ ಲಾರಿ ಹಾಗೂ ಲಘು ವಾಹನಗಳ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿತ್ತು. 6 ಚಕ್ರ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.












Click it and Unblock the Notifications