ಚಾರ್ಮಾಡಿ ಘಾಟ್ ಬಂದ್: ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್
ಚಿಕ್ಕಮಗಳೂರು, ಜುಲೈ 30: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ರಾಷ್ಟ್ರೀಯ ಹೆದ್ದಾರಿ 173ರ ಚಾರ್ಮಾಡಿ ಘಾಟ್‌ನಲ್ಲಿ ಬೃಹತ್ ಮರ ರಸ್ತೆಗುರುಳಿದೆ. ಇದರಿಂದಾಗಿ ಚಿಕ್ಕಮಗಳೂರು-ಮಂಗಳೂರು ನಡುವಿನ ವಾಹನ ಸಂಚಾರ ಬಂದ್ ಆಗಿದೆ.
ಮಂಗಳವಾರ ಬೆಳಗ್ಗೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಮರ ರಸ್ತೆಗೆ ಉರುಳಿದೆ. ಇದರಿಂದಾಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಚಿಕ್ಕಮಗಳೂರು-ಮಂಗಳೂರು ಮಾರ್ಗದ ವಾಹನಗಳು ಸಾಲುಗಟ್ಟಿ ನಿಂತಿವೆ.

ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಕೊಟ್ಟಿಗೆಹಾರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳನ್ನು ನಿಯಂತ್ರಿಸಲು ಪೊಲೀಸರು, ಸ್ಥಳೀಯರು ಪ್ರಯತ್ನ ನಡೆಸಿದ್ದಾರೆ.
ರಸ್ತೆಯಲ್ಲಿ ಬಿದ್ದಿರುವ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಚಾರ್ಮಾಡಿ ಘಾಟ್‌ನಲ್ಲಿ ಮರ ತೆರವು ಬಳಿಕ ವಾಹನಗಳ ಸಂಚಾರ ಮತ್ತೆ ಆರಂಭವಾಗುವ ನಿರೀಕ್ಷೆ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ.
ಚಿಕ್ಕಮಗಳೂರು ಮಳೆ ಅಬ್ಬರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ದಿನದಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಭಾರೀ ಮಳೆಗೆ ಮಲೆನಾಡು ತತ್ತರಿಸಿದೆ. ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ತುಂಗಾ ನದಿ ನೀರು ಹರಿಯುತ್ತಿದೆ.
ನದಿ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ಸಂಚಾರ ನಡೆಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ದಿಢೀರ್ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಡಳಿತ ಮಲೆನಾಡು ಭಾಗದ 5 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದ್ದು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್. ಆರ್. ಪುರ ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ನೀಡಿ ಆದೇಶಿಸಿದ್ದಾರೆ.
ಮಳೆಯಿಂದಾಗಿ ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿಯ ಅಬ್ಬರ ಹೆಚ್ಚಾಗಿದೆ. ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದೆ. ಅಂಗಡಿ, ಮಳಿಗಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಗೊಂಡಿದೆ.
ಶೃಂಗೇರಿ ಪಟ್ಟಣದಲ್ಲಿ ಮತ್ತೆ ತುಂಗಾ ಪ್ರವಾಹಕ್ಕೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಸುಮಾರು 20ಕ್ಕೂ ಹೆಚ್ಚು ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ಮತ್ತೊಂದು ಕಡೆ ಚಿಕ್ಕಮಗಳೂರಿನಲ್ಲಿ ಭದ್ರಾ ನದಿ ಅಬ್ಬರಕ್ಕೆ ಬಾಳೆಹೊನ್ನೂರು ಪಟ್ಟಣ ಮುಳುಗಡೆಯಾಗಿದೆ. ದೋಬಿ ಹಳ್ಳದ ಪ್ರವಾಹದಿಂದ ಶಾಲೆ, ಅಂಗಡಿ-ಮುಂಗಟ್ಟುಗಳು, ಮೀನು ಮಾರುಕಟ್ಟೆ, ಸಂತೆ ಮೈದಾನ ಮುಳುಗಡೆಯಾಗಿದೆ.
ಭದ್ರಾ ನದಿ ಪ್ರವಾಹದಿಂದ ದೋಬಿ ಹಳ್ಳ ತುಂಬಿದ್ದು, ಬಾಳೆಹೊನ್ನೂರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ, ಅಡಿಕೆ ತೋಟಗಳು ಸಂಪೂರ್ಣ ಜಲಾವೃತವಾಗಿದ್ದು, ಭಾರೀ ಮಳೆಯಿಂದಾಗಿ ಭದ್ರಾ ನದಿ ಪಾತ್ರದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ.












Click it and Unblock the Notifications