ಚಿಕ್ಕಮಗಳೂರಿನಲ್ಲಿ ಅಪಘಾತಕ್ಕೊಳಗಾದ ಕಾರಿನಲ್ಲಿ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್, ಮದ್ಯ, ಮಾರಾಕಾಸ್ತ್ರಗಳು ಪತ್ತೆ
ಚಿಕ್ಕಮಗಳೂರು, ಮಾರ್ಚ್, 27: ಕಾರುವೊಂದರ ಬ್ರೇಕ್ ಡೌನ್ ಆಗಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್‌ನಲ್ಲಿ ತಡರಾತ್ರಿ ನಡೆದಿದೆ. ಈ ವೇಳೆ ಕಾರು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಅಷ್ಟೇ ಅಲ್ಲದೆ ಇದೇ ವೇಳೆ ಕಾರಿನಲ್ಲಿ ಮದ್ಯ, ಲಾಂಗ್ ಹಾಗೂ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಕೂಡ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯರು ಕಾರಿನಲ್ಲಿದ್ದ ಮದ್ಯ, ಕ್ಯಾಲೆಂಡರ್, ಲಾಂಗ್ ಅನ್ನು ಹೊರತೆಗೆದಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಕಾರಿನಲ್ಲಿ ಸಿಕ್ಕಂತಹ ಮಾರಕ ಅಸ್ತ್ರಗಳನ್ನು ಪರಿಶೀಲನೆಗೆ ಬಂದಂತಹ ನಗರ ಪೊಲೀಸರಿಗೆ ಒಪ್ಪಿಸಲಾಗಿದೆ.

ಕಾರಿನಲ್ಲಿ ಸಿ.ಟಿ.ರವಿ ಫೋಟೋ, ಮದ್ಯ ಪತ್ತೆ
ಅಪಘಾತದ ವೇಳೆ ಕಾರು ಪರಿಶೀಲಿಸಿದ ಸ್ಥಳೀಯರು ಲಕ್ಷಾಂತರ ಮೌಲ್ಯದ ಮದ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಭಾವಚಿತ್ರ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೇ ಈ ವೇಳೆ ಆಕ್ರೋಶಗೊಂಡಿದ್ದ ಕೆಲವು ಸ್ಥಳೀಯರು ಸಿ.ಟಿ.ರವಿ ವಿರುದ್ಧ ಒ.ಟಿ.ರವಿ ಎಂದು ಘೋಷಣೆ ಮೊಳಗಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲೇ ಲಕ್ಷಾಂತರ ಮೌಲ್ಯದ ಮಾಲ್ಗಳು, ಹಾಗೂ ಬಿಜೆಪಿ ನಾಯಕನ ಭಾವಚಿತ್ರ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ಕೊಡಬೇಡಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ಬಾರಿ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಸ್ವಪಕ್ಷದವರ ವಿರುದ್ಧವೇ ತಿರುಗಿಬಿದ್ದಾರೆ. ಇದೇ ರೀತಿ ಬಿಜೆಪಿ ಕಾರ್ಯಕರ್ತರು ಮೂಡಿರೆಯಿಂದ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಇತ್ತೀಚೆಗಷ್ಟೇ ಪಟ್ಟುಹಿಡಿದು ಪ್ರತಿಭಟನೆ ನಡೆಸಿದ್ದರು.

ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ಭೇಟಿ ನೀಡಿದ ಸಾವಿರಾರು ಕಾರ್ಯಕರ್ತರು, ಎಂ.ಪಿ.ಕುಮಾರಸ್ವಾಮಿಗೆ ಈ ಬಾರಿ ಟಿಕೆಟ್ ನೀಡಬೇಡಿ ಎಂದು ಆಗ್ರಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮುಂಚೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಟ್ಟು ಹೊಸಮುಖಗಳಿಗೆ ಟಿಕೆಟ್ ಕೊಡಿ ಎಂದು ನೂರಾರು ಕಾರ್ಯಕರ್ತರು ಮೂಡಿಗೆರೆಯ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಕಾರ್ಯಕರ್ತರ ಆಕ್ರೋಶ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿದ್ದರು.
ತಮ್ಮ ಕಾರ್ಯಕರ್ತರು ರಸ್ತೆ ಮಧ್ಯೆಯೇ ಅಡ್ಡ ಹಾಕಿ ಪ್ರತಿಭಟನೆ ನಡೆಸಿದ ಕಾರಣ ಬಿ.ಎಸ್. ಯಡಿಯೂರಪ್ಪ ಕೋಪಗೊಂಡು ರೋಡ್ ಶೋ ರದ್ದು ಮಾಡಿ ಹೆಲಿಪ್ಯಾಡ್‌ನತ್ತ ತೆರಳಿದ್ದರು. ಈ ವೇಳೆ ಸಿ.ಟಿ. ರವಿ ಮಾತನಾಡಿ, ಪಕ್ಷದ ಮರ್ಯಾದೆ ಕಳೆಯುತ್ತಿದ್ದೀರಾ? ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು ಎಂದು ಹೇಳುವ ಮೂಲಕ ರಾಷ್ಟ್ರಿಯ ಹೆದ್ದಾರಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ನಂತರವೂ ಕೂಡ ಕಾರ್ಯಕರ್ತರು ನಮಗೆ ಕುಮಾರಸ್ವಾಮಿ ಬೇಡವೇ ಬೇಡ ಎಂದು ಹೇಳುವ ಮೂಲಕ ಬಿ.ಎಸ್.ವೈ. ಬರುವ ಮಾರ್ಗದಲ್ಲಿ ರಸ್ತೆ ಅಡ್ಡಗಟ್ಟಿ ಕೂಗಾಟ ನಡೆಸಿದ್ದರು. ಹೆದ್ದಾರಿಯಲ್ಲಿ 1000ಕ್ಕೂ ಅಧಿಕ ಜನರು ಪ್ರತಿಭಟನೆ ನಡೆಸಿದ್ದು, ಹೊಸ ಮುಖಕ್ಕೆ ಟಿಕೆಟ್ ಕೊಡಿ ಎಂದು ಪಟ್ಟುಹಿಡಿದಿದ್ದರು.
ಈ ವೇಳೆ ಶಾಸಕ ಎಂ.ಪಿ.ಕುಮಾರಸ್ವಾಮಿಯನ್ನು ಪೊಲೀಸರು ಬೇರೆಡೆಗೆ ಕರೆದೊಯ್ದಿದ್ದರು. ಇನ್ನು ಲಿಂಗಾಯತರ ಮತ ಬೇಡ ಎನ್ನುವ ಹೇಳಿಕೆ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿತ್ತು. ಇದನ್ನು ಸಿ.ಟಿ.ರವಿ ಹೇಳಿದ್ದಾರೆ ಎಂದು ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಿ.ಎಸ್.ವೈ. ಆ ರೀತಿ ಯಾರೂ ಹೇಳಿಕೆ ಕೊಡಬಾರದು, ಅದು ತಪ್ಪು. ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಹೇಳಿದ್ದರು.
ಹಾಗೆಯೇ ಭಾನುನಾರ (ಮಾರ್ಚ್ 26) ತಡರಾತ್ರಿ ಕಾರಿನೊಂದರಲ್ಲಿ ಸಿ.ಟಿ.ರವಿಯವರ ಭಾವಚಿತ್ರದ ಜೊತೆಗೆ ಮಾರಕ ಅಸ್ತ್ರಗಳು, ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಇದು ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications