ಮನೆ ಕಳೆದುಕೊಂಡ ಕುಟುಂಬದ ಕಣ್ಣೀರಿನ ಕಥೆ: ನೆರವಿನ ಹಸ್ತ ಚಾಚಿದ ಸಚಿವ
ಚಿಕ್ಕಮಗಳೂರು, ಜುಲೈ 18 : ಮಲೆನಾಡಲ್ಲಿ ಸುರಿಯುತ್ತಿರುವ ಮಹಾಮಳೆ ನೂರಾರು ಜನರನ್ನು ಬೀದಿಗೆ ಬೀಳಿಸುತ್ತಿದೆ. ನಿರಂತರ ಮಳೆಯಿಂದ ಮಲೆನಾಡಿಗರ ಬದುಕು ಶೋಚನೀಯ ಸ್ಥಿತಿಗೆ ತಂದೊಡ್ಡಿದೆ. ಮಳೆಯ ನಡುವೆ ಟಾರ್ಪಲ್ ಕಟ್ಟಿಕೊಂಡು ಬದುಕು ಸಾಗಿಸುತ್ತಿರೋ ಮೂಡಿಗೆರೆಯ ಬಡ ಕುಟುಂಬದ ಕಥೆ ಕಣ್ಣೀರು ತರಿಸುವಂತಿದೆ.
ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಆಜಾದ್ ರಸ್ತೆಯಲ್ಲಿರುವ ಲೀಲಾ ಎಂಬುವರ ಮನೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಹಾನಿಯಾಗಿದ್ದು, ನೆಲೆಸಲು ನೆರಳಿಲ್ಲದೇ ಪಕ್ಕದಲ್ಲೇ ಟಾರ್ಪಲ್‍ನಿಂದ ಟೆಂಟ್ ಕಟ್ಟಿಕೊಂಡು ದಿನ ದೂಡುತ್ತಿದ್ದು, ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಲೀಲಾ ಅವರಿಗೆ ನಾಲ್ಕು ಜನ ಮಕ್ಕಳಿದ್ದು, ಗಂಡ ಮೃತಪಟ್ಟಿದ್ದಾರೆ. ಇದ್ದ ಮನೆಯೂ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು, ಗೋಡೆಗಳು ಮಾತ್ರ ಉಳಿದುಕೊಂಡಿದೆ. ಮನೆ ಕಳೆದುಕೊಂಡು ದಿಕ್ಕು ಕಾಣದ ಅವರು ಪಕ್ಕದಲ್ಲೇ ಟಾರ್ಪಲ್‍ನಿಂದ ಟೆಂಟ್ ಕಟ್ಟಿಕೊಂಡು ಅಲ್ಲೇ ವಾಸ ಮಾಡುತ್ತಿದ್ದಾರೆ.

ಮನೆ ಕಳೆದುಕೊಂಡ ಲೀಲಾ ನಾಲ್ಕು ಜನ ಮಕ್ಕಳೊಂದಿಗೆ ಟಾರ್ಪಲ್‍ನಿಂದ ನಿರ್ಮಿಸಿ ಕೊಂಡಿರುವ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಹೊರಗಡೆ ಭೋರ್ಗರೆಯುವ ಮಳೆ, ಮತ್ತೊಂದು ಕಡೆ ಚಳಿ ಗಾಳಿಯ ನಡುವೆ ಜೀವ ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಟಾರ್ಪಲ್‍ನಿಂದ ನಿರ್ಮಿಸಿಕೊಂಡಿರುವ ಗುಡಿಸಲಿನಲ್ಲಿ ಮಳೆ ನೀರು ನುಗ್ಗತ್ತದೆ. ನೆಲವೆಲ್ಲ ತಂಡಿಯಾಗಿದೆ. ಮನೆಯ ಕಷ್ಟವನ್ನು ನೋಡಿ ಓದುತ್ತಿದ್ದ ಓರ್ವ ಮಗಳು ಓದು ನಿಲ್ಲಿಸಿ ದಿನ ಗೂಲಿಗೆ ಹೋಗಿ ದುಡಿದು ತಂದು ಮನೆ ನಿರ್ವಹಿಸುವ ಸ್ಥಿತಿ ಇದ್ದು ಇಂದೊಂದು ಕರುಣಾ ಜನಕ ಕಥೆಯಾಗಿದೆ.
ಲೀಲಾರ ಮೂರು ಜನ ಮಕ್ಕಳು ಸದ್ಯ ಓದುತ್ತಿದ್ದಾರೆ. ಅವರು ಈ ಗುಡಿಸನಲ್ಲಿ ದೀಪದ ಬೆಳಕಿನಲ್ಲಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಇಲ್ಲದೇ ಮಕ್ಕಳು ಓದಲು ಹರಸಾಹಸ ಪಡುವಂತಾಗಿದೆ. ಮಳೆ ಲೀಲಾ ಬದುಕು ಮೂರಾಬಟ್ಟೆಯಾಗಿಸಿದೆ. ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಲೀಲಾ ಅವರ ನೆರವಿಗೆ ಜಿಲ್ಲಾಡಳಿತ ಮತ್ತು ಸರ್ಕಾರ ಧಾವಿಸಬೇಕಿದೆ.

ಇನ್ನು ಲೀಲಾ ಕುಟುಂಬದ ಸ್ಥಿತಿ ಕಂಡು ಸ್ಥಳೀಯೊಬ್ಬರು ಉಸ್ತುವಾರಿ ಸಚಿವರಿಗೆ ಮಾಹಿತಿ ತಿಳಿಸುತ್ತಿದ್ದಂತೆ , ಅವರ ಮನೆಗೆ ಆಗಮಿಸಿದ ಸಚಿವ ಬೈರತಿ ಬಸವರಾಜ್ ,ಕುಟುಂಬಕ್ಕೆ ಧೈರ್ಯ ತುಂಬಿದ್ದಲ್ಲದೆ, ಸರ್ಕಾರ ನಿಮ್ಮೊಟ್ಟಿಗೆ ಇದೆ, ಕೂಡಲೇ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಬಡ ಕುಟುಂಬ ಸ್ಥಿತಿ ಕಂಡ ಉಸ್ತುವಾರಿ ಸಚಿವರು ತಕ್ಷಣವೇ ತಮ್ಮ ಜೇಬಿನಲ್ಲಿದ್ದ 50 ಸಾವಿರ ಹಣ ನೀಡಿ, ಇದನ್ನ ಮಕ್ಕಳ ವಿದ್ಯಾಭ್ಯಾಸ ಕ್ಕೆ ಬಳಸಿ ಸರ್ಕಾರದ ಪರಿಹಾರದಲ್ಲಿ ಮನೆ ಕಟ್ಟಿಸಿಕೊಳ್ಳಿ ಎಂದು ದೈರ್ಯ ತುಂಬಿದರು.












Click it and Unblock the Notifications