ಚಿಕ್ಕಮಗಳೂರು; ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ
ಚಿಕ್ಕಮಗಳೂರು, ನವೆಂಬರ್ 23; ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಕಣ ರಂಗೇರಿದೆ. ಮಂಗಳವಾರ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, 14ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ ಕಚೇರಿಯಿಂದ ನೂರಾರು ಕಾರ್ಯಕರ್ತರ ಜೊತೆಗೆ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ಎಂ. ಕೆ. ಪ್ರಾಣೇಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ. ಎನ್. ಜೀವರಾಜ್, ಶಾಸಕರಾದ ಡಿ. ಎಸ್. ಸುರೇಶ್, ಎಂ. ಪಿ. ಕುಮಾರಸ್ವಾಮಿ ಜೊತೆಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಕೆ. ಎನ್. ರಮೇಶ್‌ಗೆ ನಾಮಪತ್ರ ಸಲ್ಲಿಸಿದರು.
ಪರಿಷತ್ ಫೈಟ್; ಕುಟುಂಬ ರಾಜಕೀಯದ ಬಗ್ಗೆ ಬಿಜೆಪಿ ಟ್ವೀಟ್!
ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ನಗರದ ಎಂ. ಜಿ. ರಸ್ತೆಯ ಗಣಪತಿ ದೇವಸ್ಥಾನದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಕೇಂದ್ರ ಸಚಿವೆ ಡಿ. ಕೆ. ತಾರಾದೇವಿ, ಮೋಟಮ್ಮ, ಎಸ್. ಎಂ. ನಾಗರಾಜ್ ಜೊತೆಗಿದ್ದರು.
ಪರಿಷತ್ ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆ
ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಮಾತನಾಡಿ, "ಎಲ್ಲಾ ಮತದಾರರ ಸಹಕಾರದಿಂದ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತೇನೆ. 6 ವರ್ಷ ತನ್ನ ಅವಧಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಪಕ್ಷಾತೀತವಾಗಿ ಅನುದಾನ ನೀಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿರಬಹುದು ನಂತರದಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ ಎಂಬ ತಾರತಮ್ಯ ಮಾಡದೇ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯನಿಗಿರುವ ಮಿತಿಯಲ್ಲಿ ಅನುದಾನ ನೀಡಿದ್ದೇನೆ" ಎಂದರು.
ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಈ ವೇಳೆ ತನ್ನ ಪ್ರತಿಸ್ಪರ್ಧಿ ಗಾಯಿತ್ರಿ ಶಾಂತೇಗೌಡ ಬಗ್ಗೆ ಕಿಡಿಕಾರಿದ ಅವರು, "ಕೆಲವರು ವಿರೋಧಕ್ಕೋಸ್ಕರ ಇಲ್ಲದ ಸಲ್ಲದ ಹೇಳಿಕೆ ನೀಡಿದ್ದಾರೆ. ಆದರೆ ಅವರು ತಾವು ವಿಧಾನ ಪರಿಷತ್ ಸದಸ್ಯರಾದಾಗ ಗ್ರಾಮ ಪಂಚಾಯಿತಿಗಳಿಗೆ ಏನು ನೀಡಿದ್ದೀರಿ? ಎಂಬುದರ ಬಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು" ಎಂದು ಹೇಳಿದರು.
ಬಿಜೆಪಿಯಲ್ಲಿ ಬಂಡಾಯದ ಬಾಣ ಬಿಟ್ಟಿದ್ದ ಕಡೂರು ಬಿಜೆಪಿ ಮುಖಂಡ ದೇವರಾಜ್ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ದೇವರಾಜ್ ಜೊತೆಗೆ ಮಾತನಾಡಿದ್ದೇವೆ. ಈ ಕುರಿತು ಸಭೆಯನ್ನು ಮಾಡಲಾಗಿದೆ. ನನಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ ಮಾತನಾಡಿ, "ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಗ್ರಾಮ ಪಂಚಾಯಿತಿಗಳಿಗೆ ಗಾಯಿತ್ರಿ ಶಾಂತೇಗೌಡ ಕೊಡುಗೆ ಏನು? ಎಂದು ಮಾಧ್ಯಮದ ಮೂಲಕ ಪ್ರಶ್ನಿಸಿದ್ದಾರೆ. ನನ್ನ ಕೊಡುಗೆ ಏನು ಎಂಬುದು ತಿಳಿಯಬೇಕಾದರೆ ಗ್ರಾಮಗಳಿಗೆ ಹೋಗಿ ತಿಳಿದುಕೊಳ್ಳಬೇಕೆಂದು" ತಿರುಗೇಟು ನೀಡಿದರು.
"ನನ್ನ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇವೆ. ಅವರ ಕಾಲದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಶ್ವೇತಪತ್ರ ಹೊರಡಿಸಲಿ" ಎಂದು ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್‌ಗೆ ಸವಾಲೆಸೆದರು.
ಕಾಂಗ್ರೆಸ್ ಮುಖಂಡ ಬಿ. ಎಲ್. ಶಂಕರ್ ಮಾತನಾಡಿ, "ಈ ಚುನಾವಣೆ ಒಂದು ಸೈದ್ದಾಂತಿಕ ಸಂಘರ್ಷ. ಕಳೆದ 7 ವರ್ಷದಲ್ಲಿ ರಾಷ್ಟ್ರದಲ್ಲಿನ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅನೇಕ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ವಿಶೇಷವಾಗಿ ರೈತ ವಿರೋಧಿ ನೀತಿಗಳನ್ನು ಅನುಸರಿಸುವ ಜೊತೆಗೆ ಅತಿವೃಷ್ಟಿ ಅನಾವೃಷ್ಟಿ ನಡೆದರೂ ಸಹ ಅದಕ್ಕೆ ಸರ್ಕಾರ ವಿಮುಖವಾಗಿ ವರ್ತಿಸಿದೆ. ಈ ನೀತಿಯ ವಿರುದ್ಧ ಇಡೀ ದೇಶದಲ್ಲಿ ಜನಾಭಿಪ್ರಾಯ ಉಂಟಾಗಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತಾಗಿದ್ದು ಇದು ಭವಿಷ್ಯದ ರಾಜಕಾರಣದ ದಿಕ್ಸೂಚಿ" ಎನ್ನಬಹದು ಎಂದರು.
"ಈ ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಗುರುತಿಸಿಕೊಂಡಿರುವ ರೀತಿ ನೋಡಿದರೆ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾದ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರ ಸಂಖ್ಯೆ ಹೆಚ್ಚಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಇರುವುದರಿಂದ ಬಿಜೆಪಿ ವಿರುದ್ಧ ಎಲ್ಲಾ ಮತಗಳು ಕ್ರೋಢಿಕರಣಗೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಕೆ. ಬಿ. ಮಲ್ಲಿಕಾರ್ಜುನ್ ಮಾತನಾಡಿ, "ಈ ಬಾರಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು ಗಾಯಿತ್ರಿ ಶಾಂತೇಗೌಡ ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಜನರ ಮನಸ್ಸಿನಲ್ಲಿದೆ. ಹಾಗಾಗಿ ಅವರ ಗೆಲುವು ನಿಶ್ಚಿತ" ಎಂದು ಹೇಳಿದರು.
ಘೋಷಣೆಯಲ್ಲಿ ಪೈಪೋಟಿ; ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಎರಡು ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯಿಂದ ನೂರು ಮೀಟರ್ ದೂರದಲ್ಲಿ ಪೊಲೀಸ್ ಇಲಾಖೆ ಹಾಕಿದ್ದ ಬ್ಯಾರಿಕೇಡ್ ಬಳಿ ಸಮಾಗಮಗೊಂಡರು.
ಈ ವೇಳೆ ಅತ್ತ ಬಿಜೆಪಿ ಕಾರ್ಯಕರ್ತರು ಬಾವುಟ ಹಿಡಿದು ಜೈಕಾರ ಕೂಗಿದರು. ಇತ್ತ ನಾವೇನು ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್ ಕಾರ್ಯಕರ್ತರು ಸಹ ವಿವಿಧ ಘೋಷಣೆಗಳನ್ನು ಕೂಗಿದರು. ಹೀಗೆ ಕೆಲಹೊತ್ತಿನ ತನಕ ಘೋಷಣೆಗಳ ಪೈಪೋಟಿ ಎರ್ಪಟ್ಟಿತ್ತು. ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಬಂದ ಬಳಿಕ ಕಾರ್ಯಕರ್ತರು ಅಭ್ಯರ್ಥಿಗಳ ಜೊತೆ ತೆರಳಿದರು.