ಭದ್ರಾ ನದಿ ಒಳ ಹರಿವಿನಲ್ಲಿ ಏರಿಕೆ, ಚಿಕ್ಕಮಗಳೂರು ಜಿಲ್ಲೆಯ ಈ ನಾಲ್ಕು ತಾಲೂಕುಗಳ ಜನರಿಗೆ ಎದುರಾಯ್ತು ಪ್ರವಾಹ ಭೀತಿ
ಚಿಕ್ಕಮಗಳೂರು, ಜುಲೈ, 20: ಈಗಾಗಳೆ ರಾಜ್ಯದ ಹಲವೆಡೆ ಮುಂಗಾರು ಚುರುಕು ಪಡೆದಿದ್ದು, ಇದರಿಂದ ಬಹುತೇಕ ಜಲಾಶಯಗಳ ನೀರಿನ ಮಟ್ಟವೂ ಕೂಡ ಏರಿಕೆಯಾಗುತ್ತಲೇ ಇದೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ನಿರಂತರ ಮಳೆಯಾದ ಹಿನ್ನೆಲೆ ಭದ್ರಾ ನದಿ ಹರಿವಿನಲ್ಲಿ ಭಾರೀ ಏರಿಕೆಯಾಗಿದೆ.
ಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಿದೆ. ಈ ಸೇತುವೆ ಮುಳುಗಡೆಗೆ ನಾಲ್ಕು ಅಡಿಯಷ್ಟೇ ಬಾಕಿ ಇದೆ. ಇನ್ನು ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಇಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ.

ವಾಹನ ಸಂಚಾರ ಸ್ಥಗಿತ
ಹೀಗೆ ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ, ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಡುವಿಲ್ಲದೆ ಅಬ್ಬರಿಸುತ್ತಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಹಾಗೂ ಕೊಟ್ಟಿಗೆಹಾರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮರ ತೆರವು ಕಾರ್ಯಾಚರಣೆ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರ ನೆರವಿನಿಂದ ರಸ್ತೆಯಲ್ಲಿ ಬಿದ್ದಿದ್ದ ಮರ ತೆರವು ಕಾರ್ಯಾಚರಣೆ ನಡೆದಿದ್ದು, ಧಾರಾಕಾರ ಮಳೆಯ ನಡುವೆಯೂ ವಿಪತ್ತು ನಿರ್ವಹಣಾ ತಂಡದ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರಿ ಗಾಳಿ ಮಳೆಯೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದ್ದು ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಕುಸಿದು ಬಿದ್ದ ಮನೆಗೋಡೆ
ಇನ್ನು ಮಳೆಯಿಂದಾಗಿ ಮನೆಯ ಮುಂದೆ ನಿರ್ಮಿಸಿದ್ದ ಬೃಹತ್ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಓಣಿಗಂಡಿ ಗ್ರಾಮದಲ್ಲಿ ನಡೆದಿದೆ. ತಡೆಗೋಡೆ ಕುಸಿತದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಕಳೆದ ವರ್ಷ ಮನೆಯ ಅಡಿಪಾಯಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ಇದೀಗ ಮಳೆ ಹೆಚ್ಚಾದ ಪರಿಣಾಮ ಕುಸಿಯಲು ಆರಂಭಿಸಿದೆ.
ಗ್ರಾಮದ ಭಾಸ್ಕರ್ ಡೋಂಗ್ರೆ ಎಂಬುವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ಕ್ಷಣ ಕ್ಷಣಕ್ಕೂ ಕುಸಿವ ಭೀತಿ ಎದುರಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಭಾರೀ ಮಳೆಗೆ ವೃದ್ಧೆ ಬಲಿ
ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ವೃದ್ಧೆ ಬಲಿ ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೇಮಾವತಿ ನದಿ ರಭಸವಾಗಿ ಹರಿಯುತ್ತಿದ್ದ ಪರಿಣಾಮ ವೃದ್ಧೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ದಾರದಹಳ್ಳಿ ಗ್ರಾಮದ 61 ವರ್ಷದ ದೇವಮ್ಮ ಮೃತರು ಎಂದು ಗುರುತಿಸಲಾಗಿದೆ.












Click it and Unblock the Notifications