ಭದ್ರಾ ಬಲದಂಡೆ ನಾಲೆಯ ತಡೆಗೋಡೆಯಲ್ಲಿ ಬಿರುಕು, ಬರಗೇನಹಳ್ಳಿ ಗ್ರಾಮಸ್ಥರಲ್ಲಿ ಆತಂಕ
ಚಿಕ್ಕಮಗಳೂರು, ಜೂನ್, 11: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬರಗೇನಹಳ್ಳಿ ಗ್ರಾಮದ ಬಳಿ ಇರುವ ಭದ್ರಾ ಬಲದಂಡೆ ನಾಲೆಯ ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದರ ಜೊತೆ ಅಲ್ಲಲ್ಲೇ ಕುಸಿಯುವ ಹಂತ ತಲುಪಿದೆ. ಇದರಿಂದ ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಆತಂಕ ಶುರುವಾಗಿದೆ.
ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ದಾವಣಗೆರೆಗೆ ನೀರು ಪೂರೈಸುವ ಭದ್ರಾ ಬಲದಂಡೆ ನಾಲೆಯ ತಡೆಗೋಡೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಬರೋಬ್ಬರಿ 5 ಕಿ.ಮೀ.ವರೆಗೂ ನಾಲೆಯ ತಡೆ ಗೋಡೆಗಳು ಬಿರುಕು ಬಿಟ್ಟು ಕಳಚಿ ಬಿದ್ದಿದ್ದು, ಕುಸಿಯುವ ಹಂತ ತಲುಪಿದೆ. ತರೀಕೆರೆ ತಾಲೂಕಿನ ಬರಗೇನಹಳ್ಳಿ ಗ್ರಾಮದ ಬಳಿ ಅತೀ ಹೆಚ್ಚು ಪ್ರಮಾಣದಲ್ಲಿ ನಾಲೆಯ ಗೋಡೆ ಕುಸಿತಕ್ಕೆ ಒಳಗಾಗಿದ್ದು, ಇಲ್ಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಮಳೆಗಾಲದಲ್ಲಿ ನಾಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಈಗಲೇ ನಾಲೆಯ ತಡೆಗೋಡೆ ಕುಸಿಯುತ್ತಿರುವುದರಿಂದ ಸುತ್ತಮುತ್ತಲಿನ ಜನರಲ್ಲಿ ಆತಂಕ ಉಂಟಾಗಿದೆ. ಅಲ್ಲದೆ ಬೇಲೇನಹಳ್ಳಿ ಬಹುಗ್ರಾಮ ಕುಡಿಯುವ ನೀರು ಪೂರೈಕೆಗೆ ನಿರ್ಮಿಸುವ ಜಾಕ್ ವೆಲ್ ಬಳಿಯು ತಡೆಗೋಡೆಗಳು ಶಿಥಿಲಾವಸ್ಥೆ ತಲುಪಿದ್ದು, ನಾಲೆ ತಡೆಗೋಡೆ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ.
ಈ ಬಗ್ಗೆ ಸ್ಥಳೀಯರು ಕೂಡ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಆದರೆ, ಡ್ಯಾಂ ಅಧಿಕಾರಿಗಳು, ತಹಶೀಲ್ದಾರ್ ಯಾರೊಬ್ಬರು ಕೂಡ ಇದುವರೆಗೂ ಸೂಕ್ತ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆ ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬೇಸಿಗೆ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಅನ್ನದಾತ
ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದು, ಬೇಸಿಗೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂಗಾರು ಮಳೆ ವಿಳಂಬ ಆದರೆ ಕೃಷಿ ಬೆಳೆಗಳು ಒಣಗಿ ಹೋಗಲಿದ್ದು, ಇದರಿಂದ ಜಿಲ್ಲೆಯ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಆದರೂ ಅಚ್ಚರಿಪಡಬೇಕಿಲ್ಲ.
ಜಿಲ್ಲೆಯಲ್ಲಿ 4,98,244 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, 2,60,901 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಏಪ್ರಿಲ್ ತಿಂಗಳು 46.6 ಮಿ.ಮೀ. ವಾಡಿಕೆ ಮಳೆಯಾಗಿದ್ದು, 26.2 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಹೀಗೆ ಜಿಲ್ಲೆಯಲ್ಲಿ 43.8ರಷ್ಟು ಮಳೆ ಕೊರತೆ ಎದುರಾಗಿದೆ. ಮೇ ತಿಂಗಳಿನಲ್ಲಿ 99.9 ಮಿ.ಮೀ. ವಾಡಿಕೆ ಮಳೆಯಾಗಿದ್ದು, 137.3 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆದರೆ ಈ ಮಳೆ ಒಂದೆರೆಡು ದಿನಗಳಲ್ಲಿ ಆಗಿರುವುದರಿಂದ ರೈತರ ಬೆಳೆಗೆ ಅಷ್ಟೇನೋ ಪ್ರಯೋಜನ ಆಗಿಲ್ಲ.
ಪ್ರಸ್ತುತ ಬೇಸಿಗೆ ಬೆಳೆಗಳಾದ ಭತ್ತ 17,848 ಹೆಕ್ಟೇರ್, 2,885 ಹೆಕ್ಟೇರ್ ರಾಗಿ, 872 ಹೆಕ್ಟೇರ್ ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳು ಸೇರಿ ಒಟ್ಟು 25,897 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದೆ. ಭತ್ತದ ಬೆಳೆಯು ಕಟಾವಿನ ಹಂತದಲ್ಲಿದೆ. ಇನ್ನು ವಿವಿಧ ಹಂತಗಳಲ್ಲಿ ಬೆಳೆದು ನಿಂತಿರುವ 43,495 ಹೆಕ್ಟೇರ್ ಕಬ್ಬಿನ ಬೆಳೆ ಕಟಾವಿಗೆ ಬಂದಿದ್ದು, ಇದಕ್ಕೆ 2 ರಿಂದ 3 ಬಾರಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಬೇಕಿದೆ.
17,600 ಹೆಕ್ಟೇರ್ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು, 15,369 ಹೆಕ್ಟೇರ್‌ನಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಇದರೊಂದಿಗೆ ಶೇ.87.33ರಷ್ಟು ಗುರಿ ಸಾಧಿಸಲಾಗಿದೆ. ಬಿತ್ತನೆ ಆಗಿರುವ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ (8060 ಹೆಕ್ಟೇರ್), ಎಳ್ಳು (3213 ಹೆಕ್ಟೇರ್), ಮುಸಿಕನ ಜೋಳ (506 ಹೆಕ್ಟೇರ್) ಹಾಗೂ ಇತರೆ ದ್ವಿದಳ ಧಾನ್ಯಗಳು ಸೇರಿವೆ.












Click it and Unblock the Notifications