ಚಿಕ್ಕಮಗಳೂರಿನ ಕಾರಾಗೃಹದಲ್ಲಿ ಮಹಿಳಾ ಪೇದೆಗೆ ಸೀಮಂತ ಕಾರ್ಯಕ್ರಮ, ಕಾರಾಗೃಹದ ಅಧೀಕ್ಷಕರು ಹೇಳಿದ್ದೇನು?
ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ಪೊಲೀಸ್ ಸಿಬ್ಬಂದಿಗಳೆಲ್ಲ ಸೇರಿ ಮಹಿಳಾ ಪೊಲೀಸ್ ಪೇದೆಗೆ ಸೀಮಂತ ಕಾರ್ಯಕ್ರಮ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ, 28: ಪ್ರತಿನಿತ್ಯ ಜಿಲ್ಲಾ ಕಾರಾಗೃಹದಲ್ಲಿ ಅಧಿಕಾರಿಗಳ ತಂಡ ಬಂಧಿತರ ದಾಖಲಾತಿ ತಪಾಸಣೆ, ಗದ್ದಲ ಹಾಗೂ ಸಂಧಾನ ಮಾಡುವಲ್ಲಿ ನಿರತರಾಗಿತ್ತಾರೆ. ಇದೀಗ ಕಾರಾಗೃಹ ಇಲಾಖೆಯ ಮಹಿಳಾ ಪೇದೆಗೆ ಸೀಮಂತ ನಡೆಸುವ ಮೂಲಕ ಅಪರೂಪ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀಶೈಲಾ ಎಸ್. ಮೇಟಿ ಹೇಳಿದರು.
ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಮಹಿಳಾ ಪೇದೆಗೆ ಸೀಮಂತ ನಡೆಸಲಾಯಿತು. ಅಧಿಕಾರಿ ಹಾಗೂ ಸಿಬ್ಬಂದಿ ಕುಟುಂಬ ಕಲ್ಯಾಣ ದಿನಾಚರಣೆ ಪ್ರಯುಕ್ತ ಇಲಾಖೆಯ ಮಹಿಳಾ ಪೇದೆ ಜಿ.ಲಾವಣ್ಯ ಅವರಿಗೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಪೇದೆಗೆ ಸೀಮಂತ ಕಾರ್ಯಕ್ರಮ
ಸದಾ ಕಾಲ ಗದ್ದಲ, ದೂರು- ಪ್ರತಿ ದೂರು, ಸಂಧಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಲಾವಣ್ಯ ಅವರಿಗೆ ಸಹೋದ್ಯೋಗಿ ಸಿಬ್ಬಂದಿಗಳು ಆರತಿ ಬೆಳಗಿ, ಮಡಿಲು ತುಂಬಿದ್ದಾರೆ. ಇದರೊಂದಿಗೆ ಮನದುಂಬಿ ಹರಸಿ, ಬೀಳ್ಕೊಟ್ಟ ಅಪರೂಪದ ಸೀಮಂತ ಕಾರ್ಯಕ್ರಮವನ್ನು ರಾಜ್ಯಾದಲ್ಲಿಯೇ ಮೊದಲ ಬಾರಿಗೆ ಕಾರಾಗೃಹದಲ್ಲಿ ಆಚರಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾರಾಗೃಹದಲ್ಲಿ ಸೀಮಂತ ಕಾರ್ಯಕ್ರಮ
ಕಾರಾಗೃಹದಲ್ಲಿ ಉತ್ತಮ ವಾತಾವರಣ ನಿರ್ಮಾಣದ ಜೊತೆಗೆ ಸಹೋದ್ಯೋಗಿ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಅಧಿಕಾರಿ, ಸಿಬ್ಬಂದಿ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ಕುಟುಂಬ ಎಂದು ಕಾರ್ಯನಿರ್ವಹಿಸಿದರೆ ಸಾರ್ವಜನಿಕವಾಗಿ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.
ಸಾಮಾನ್ಯವಾಗಿ ಪೊಲೀಸರೆಂದರೆ ಅಪರಾಧಿಗಳನ್ನು ಹುಡುಕುವುದು, ಸಂಧಾನ ಮಾಡುವು ಎಂದು ಭಾವಿಸಿರುತ್ತಾರೆ. ಆದರೆ ಅವರು ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಹಾಕುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಾರಾಗೃಹದ ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.












Click it and Unblock the Notifications