ತೇಜಸ್ವಿ ಸೂರ್ಯ ಆಡಿಯೋ ವೈರಲ್: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷನಿಗೆ ಕೊಕ್
ಚಿಕ್ಕಮಗಳೂರು, ಆಗಸ್ಟ್ 19: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ತೇಜಸ್ವಿ ಸೂರ್ಯ ಮತ್ತು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಡುವಿನ ಸಂಭಾಷಣೆ ವೈರಲ್ ಆಗಿದ್ದಕ್ಕೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.
ಪ್ರವೀಣ್ ಹತ್ಯೆ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಿದ್ದರೇ ಬೀದಿಯಲ್ಲಿ ಕಲ್ಲು ಹೊಡೆಯಬಹುದಿತ್ತು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ- ಸಂದೀಪ್ ಜೊತೆಗಿನ ಮೊಬೈಲ್ ಸಂಭಾಷಣೆ ಭಾರಿ ವೈರಲ್ ಆಗಿತ್ತು.
ಪ್ರವೀಣ್ ನೆಟ್ಟಾರ್ ಹತ್ಯೆಯಿಂದ ಬೇಸತ್ತು ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಹಿಂದೂಗಳ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿ ಬಾರಿ ಹತ್ಯೆಯಾದಗಲೂ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ನೀಡುತ್ತಿರುವ ಭರವಸೆ ಬರೀ ಭರವಸೆಯಾಗಿ ಉಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಸಮಾಧಾನ ಮಾಡುವುದಕ್ಕಾಗಿ ಕರೆ ಮಾಡಿದ್ದ ಸಂಭಾಷಣೆ ವೈರಲ್ ಆಗಿ ಕಾಂಗ್ರೆಸ್ ನಾಯಕರಿಂದ ಭಾರಿ ಟೀಕೆಗೆ ಒಳಗಾಗಿತ್ತು. ಅಲ್ಲದೆ ಈ ಆಡಿಯೋ ವೈರಲ್ ವಿಚಾರ ಬಿಜೆಪಿಗೆ ಹಾಗೂ ರಾಜ್ಯ ಸರಕಾರಕ್ಕೆ ಮುಜುಗರ ತಂದಿತ್ತು. ಸಿದ್ದರಾಮಯ್ಯ ಸೇರಿ ಹಲವರು ಸೇರಿ ಸರಕಾರದ ಕಾಲೆಳೆದಿದ್ದರು. ಹಾಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಸಂದೀಪ್ ಅರಳಗಂಡಿಗೆಯನ್ನು ಜಿಲ್ಲಾ ಯುವ ಮೋರ್ಚಾ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸಂತೋಷ್ ಕೊಟ್ಯಾನ್‌ರನ್ನು ನೇಮಕ ಮಾಡಿದ್ದಾರೆ.












Click it and Unblock the Notifications