Chikkamagaluru utsav 2023: ಗಮನ ಸೆಳೆದ ಮೋಟಾರ್ ಕ್ರಾಸ್ ಸ್ಪರ್ಧೆ
ಚಿಕ್ಕಮಗಳೂರು, ಜನವರಿ, 22: ನಾಗರಿಕರಿಗೆ ಸಾಂಸ್ಕೃತಿಕ ಮನರಂಜನೆ ಜೊತೆಗೆ ದೈಹಿಕ ಉಲ್ಲಾಸ ತುಂಬಲು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು.
ನಗರ ಹೊರ ವಲಯ ಮಾಗಡಿ ಹ್ಯಾಂಡ್ ಪೋಸ್ಟ್ ಹತ್ತಿರ ಶನಿವಾರ ಚಿಕ್ಕಮಗಳೂರು ಹಬ್ಬದ ಅಂಗವಾಗಿ ಮೋಟಾರ್ ಕ್ರಾಸ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಆನಂದ, ಜ್ಞಾನಕ್ಕಾಗಿ ಚಿಕ್ಕಮಗಳೂರು ಹಬ್ಬದ ಪರಿಕಲ್ಪನೆ ರೂಪಿಸಲಾಗಿದೆ. ಒಟ್ಟು ಒಂಭತ್ತು ವೇದಿಕೆಗಳಲ್ಲಿ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಈ ಹಬ್ಬದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಳೆದ ಹತ್ತು ದಿನಗಳಿಂದ ವಿವಿಧ ಕ್ರೀಡೆಗಳು ನಡೆಯುತ್ತಿವೆ. ನಿಯಮವನ್ನು ಪಾಲಿಸಿ ಸ್ಪರ್ಧೆ ಗೆಲ್ಲಿರಿ ಎಂದು ಶುಭ ಹಾರೈಸಿದರು.
ಹಬ್ಬದ ಮೆರಗು ಹೆಚ್ಚಿಸಿದ ಕ್ರೀಡೆ
ನಂತರ ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಮಾತನಾಡಿ, ಮೋಟಾರ್ ಕ್ರಾಸ್ ಸ್ಪರ್ಧೆಗೆ ಹೊರ ರಾಜ್ಯದಿಂದಲೂ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕ್ರೀಡಾಪಟುಗಳ ಭಾಗವಹಿಸುವಿಕೆಯಿಂದ ಚಿಕ್ಕಮಗಳೂರು ಹಬ್ಬದ ಮೆರಗು ಹೆಚ್ಚಿದೆ ಎಂದರು. ಹಾಗೆಯೇ ಸ್ಪರ್ಧೆಯಲ್ಲಿ 80 ಹೆಚ್ಚು ಬೈಕ್ ಸವಾರರು ರಾಜ್ಯ, ಹೊರ ರಾಜ್ಯದಿಂದ ಭಾಗ ವಹಿಸಿದ್ದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಫೋರ್ಟ್ಸ್‌ನ ಅಧ್ಯಕ್ಷ ಜಯಂತ್, ಕಾರ್ಯದರ್ಶಿ ಅಬಿಜಿತ್ ಪೈ, ದೀಪಕ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಹಾಗೆಯೇ ಭಾನುವಾರ (ಜನವರಿ 22) ಕಾರುಗಳ ಸ್ಪರ್ಧೆಯೂ ಕೂಡ ನಡೆಯಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ವಿವಿಧ ಪ್ರದರ್ಶನಗಳ ಆಯೋಜನೆ
ಚಿಕ್ಕಮಗಳೂರು ಉತ್ಸವ ಹಿನ್ನೆಲೆ, ವಿವಿಧ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಹಾಗೆಯೇ ಆಹಾರ ಮೇಳನ್ನು ಸಹ ಏರ್ಪಡಿಸಲಾಗಿದ್ದು, ಇಲ್ಲಿ ಬಗೆಬಗೆಯ ತಿಂಡಿಗಳನ್ನು ತಯಾರು ಮಾಡಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮುರುಗನ್ ಸಾವಿರಾರು ಜನರ ಮಧ್ಯೆ ಜನಸಾಮಾನ್ಯರಂತೆ ಓಡಾಡಿಕೊಂಡು ಮಲೆನಾಡಿನ ತಿಂಡಿಗಳನ್ನು ಸವಿದು ಗಮನ ಸೆಳೆದರು. ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಹಬ್ಬಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಫಿನಾಡಿನ ಆಹಾರ ಸವಿದ ಸಚಿವರು
ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋರ್ಟ್ ಮುಂಭಾಗದ ರಸ್ತೆಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ನಷ್ಟು ಉದ್ದವಿರುವ ಫುಡ್ ಕೋರ್ಟ್‌ನಲ್ಲಿ ಸಾವಿರಾರು ಜನಗಳ ಮಧ್ಯೆ ಜನಸಾಮಾನ್ಯರಂತೆ ಇಬ್ಬರು ಕೇಂದ್ರ ಸಚಿವರು ಓಡಾಡಿದ್ದಾರೆ. ಹೀಗೆ ಓಡಾಡುತ್ತಾ ರಸ್ತೆ ಉದ್ಧಕ್ಕೂ ಇರುವ ಅಂಗಡಿಗಳಲ್ಲಿ ಪುಳಿಯೋಗರೆ, ಮದ್ದೂರು ವಡೆ, ಹೋಳಿಗೆ, ಬಜ್ಜಿ, ಪೊಂಗಲ್, ಶಾವಿಗೆ ಬಾತ್ ರುಚಿಯನ್ನು ಸವಿದಿದ್ದರು.

ಅಲ್ಲದೇ ಬಳಿಕ ಕಾಫಿನಾಡ ಕಾಫಿಯ ರುಚಿಯನ್ನು ಸವಿದಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ಜೊತೆ ಶಾಸಕ ಸಿ.ಟಿ. ರವಿಯೂ ರಸ್ತೆ ಮಧ್ಯೆ ನಿಂತು ತಿಂಡಿಯನ್ನು ಸವಿಯುವ ಮೂಲಕ ಗಮನ ಸೆಳೆದಿದ್ದಾರೆ. ಸಚಿವರು ಹಾಗೂ ಶಾಸಕರು ತಿಂದ ತಿಂಡಿ ತಿನಿಸುಗಳಿಗೆ ಹಣ ನೀಡಲು ಮುಂದಾಗಿದ್ದಾರೆ. ಆದರೆ ಅಂಗಡಿಯವರು ಅವರ ಬಳಿ ಹಣವನ್ನು ಪಡೆಯಲು ನಿರಾಕರಿಸಿದ್ದಾರೆ. ಆಗ ಕೇಂದ್ರ ಸಚಿವರು ಹಾಗೂ ಶಾಸಕರು ಹಣವನ್ನು ತೆಗೆದುಕೊಳ್ಳಲೇಬೇಕು ಎಂದು ತಿಂದಂತಹ ತಿಂಡಿಗಳಿಗೆ ಹಣವನ್ನು ನೀಡಿದ್ದಾರೆ.












Click it and Unblock the Notifications