Police v/s Lawyer; ಚಿಕ್ಕಮಗಳೂರಿನಲ್ಲಿ ಹೈಡ್ರಾಮ
ಚಿಕ್ಕಮಗಳೂರು, ಡಿಸೆಂಬರ್ 03; ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಸಂಬಂಧ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ಜಟಾಪಟಿ ಮುಂದುವರೆದಿದೆ. ಮುಂಜಾನೆ 5 ಗಂಟೆಯ ತನಕ ಪೊಲೀಸರು ಪ್ರತಿಭಟನೆ ನಡೆಸಿದ್ದು, ಪೊಲೀಸ್ ಸಿಬ್ಬಂದಿ ಬಂಧಿಸದಂತೆ ಒತ್ತಾಯಿಸಿದರು. ವಕೀಲರ ಮೇಲೆ ಹಲ್ಲೆ ಪ್ರಕರಣ ಸಂಬಂಧ 6 ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ.
ಪೊಲೀಸರ ಪ್ರತಿಭಟನೆ ಹಿನ್ನಲೆಯಲ್ಲಿ ಐಜಿಪಿ ಚಂದ್ರಗುಪ್ತ ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಐಜಿಪಿ ಭರವಸೆಗೂ ಜಗ್ಗದ ಪೊಲೀಸರು, ಬೆಳಗಿನ ಜಾವ 5 ಗಂಟೆವರೆಗೂ ಪ್ರತಿಭಟನೆ ನಡೆಯಿತು. ಒತ್ತಾಯಕ್ಕೆ ಮಣಿದ ಪೊಲೀಸರು ಮೂರು ಎಫ್‌ಐಆರ್ ಕೈಬಿಡಲಾಗಿದೆ.

ಚಿಕ್ಕಮಗಳೂರು ನಗರದಲ್ಲಿ ವಕೀಲ ಪ್ರೀತಮ್ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯ ಪಿಎಸ್‌ಐ ಸೇರಿದಂತೆ 6 ಮಂದಿ ಪೊಲೀಸರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದು, ಬಂಧನದ ಭೀತಿಯಲ್ಲಿರುವ 6 ಮಂದಿ ಪೊಲೀಸರ ಪರ ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಶನಿವಾರ ರಾತ್ರಿ ನಗರದ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪೊಲೀಸರ ಪ್ರತಿಭಟನೆಗೆ ಪೊಲೀಸರ ಕುಟುಂಬಸ್ಥರು ಜೊತೆಯಾದರು. ಈ ವೇಳೆ ಸ್ಥಳಕ್ಕೆ ಐಜಿಪಿ ಚಂದ್ರಗುಪ್ತ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದರೂ ಧರಣಿಯನ್ನು ನಿಲ್ಲಿಸಲಿಲ್ಲ. ಪರಿಣಾಮ ನಗರದ ಹನುಮಂತಪ್ಪ ವೃತ್ತದಲ್ಲಿ ವಾಹನ ಸಂಚಾರ ಸ್ತಬ್ಧಗೊಂಡಿದ್ದ ಬೆಳಗಿನ ಜಾವ 5 ಗಂಟೆವರೆಗೂ ಪೊಲೀಸರ ಪ್ರತಿಭಟನೆ ಮುಂದುವರೆದಿದೆ.
ಪೊಲೀಸರಿಗೆ ರಕ್ಷಣೆ ನೀಡಿ; ಅಮಾನತುಗೊಂಡಿರುವ 6 ಮಂದಿ ಪೊಲೀಸರ ಪರ ಕುಟುಂಬಸ್ಥರು ಬೀದಿಗಿಳಿದಿರುವುದರ ಮಧ್ಯೆ ನಗರ ವ್ಯಾಪ್ತಿಯ 6 ಪೊಲೀಸ್ ಹಾಗೂ ಜಿಲ್ಲೆಯ ವಿವಿಧ ಠಾಣೆಯ ನೂರಾರು ಪೊಲೀಸರು ಬೀದಿಗಿಳಿದಿದ್ದು, ಶನಿವಾರ ರಾತ್ರಿ ತಮ್ಮ ಕೆಲಸ ಸ್ಥಗಿತಗೊಳಿಸಿ ಪೊಲೀಸರಿಗೆ ರಕ್ಷಣೆ ನೀಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅಮಾನತುಗೊಂಡಿರುವ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಗುರುಪ್ರಸಾದ್ ಕರೆಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.
ನಂತರ ಸ್ಥಳಕ್ಕೆ ಗುರುಪ್ರಸಾದ್ ಕೆರೆಸಲಾಯಿತು. ಈ ವೇಳೆ ಗುರುಪ್ರಸಾದ್ ಪರ ಪೊಲೀಸರು ಜೈಕಾರ ಹಾಕಿದರು. ನಂತರ ವಕೀಲ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಿಸಲಾಯ್ತು. ಪೊಲೀಸ್ ಠಾಣೆ ಬಳಿ ಗುಂಪು ಸೇರಿಸಿಕೊಂಡು ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ಪ್ರಕರಣ, ಗುರುಪ್ರಸಾದ್ ಮೇಲೆ ಹಲ್ಲೆ ಹಾಗೂ ವಕೀಲರ ಒಟ್ಟು ಮೂರು ಎಫ್‌ಐಆರ್ ಹಾಕಲಾಯಿತು. ಬೆಳಗಿನ 5 ಗಂಟೆಗೆ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ಹಿಂಪಡೆದು ತಮ್ಮ ಮನೆ ತೆರಳಿದರು.
ವಕೀಲನ ಮೇಲೆ ಪೊಲೀಸರ ಹಲ್ಲೆ; ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಸಂಬಂಧ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ಜಟಾಪಟಿ ನಡೆಯುತ್ತಿದೆ. ಹೆಲ್ಮೆಟ್ ಹಾಕದ ಕಾರಣ ಲಾಯರ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ.
ಹೆಲ್ಮೆಟ್ ಹಾಕದ ಕಾರಣಕ್ಕೆ ವಕೀಲ ಪ್ರೀತಮ್ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಗುರುವಾರ ತಡರಾತ್ರಿಯಿಂದ ವಕೀಲರು ಮತ್ತು ಪೊಲೀಸರು ನಡುವೆ ಈ ವಿಚಾರದಲ್ಲಿ ಹೈಡ್ರಾಮ ನಡೆಯುತ್ತಿದೆ. ಪೊಲೀಸರು ಹಲ್ಲೆ ಮಾಡಿದ್ದರಿಂದ ಪ್ರೀತಮ್ ಎದೆ, ಬೆನ್ನು, ಕೈಯಲ್ಲಿ ಗಾಯವಾಗಿದೆ. ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಪ್ರೀತಮ್ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಕೀಲ ಪ್ರೀತಮ್ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಬೇಕು ಎಂದು ಶುಕ್ರವಾರ ತಡರಾತ್ರಿ 2 ಗಂಟೆ ತನಕ ಪೊಲೀಸ್ ಠಾಣೆ ಮುಂದೆ ವಕೀಲರು ಧರಣಿ ಕೂತರು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸ್ ಸಿಬ್ಭಂದಿ ಮೇಲೆ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಪೊಲೀಸರನ್ನು ಬಂಧಿಸಬಾರದು ಎಂದು ನಗರದ ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಈ ಕುರಿತು ಮಾತನಾಡಿ, "ಈ ಘಟನೆ ಸಂಬಂಧ 6 ಜನ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ,. ಪ್ರಕರಣ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಓರ್ವ ಪಿಎಸ್‌ಐ, ಓರ್ವ ಎಎಸ್‌ಐ, ಓರ್ವ ಹೆಡ್ ಕಾನ್ಸ್‌ಟೇಬಲ್, ಮೂವರು ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications