Police v/s Lawyer; ಸಿಐಡಿ ಡಿಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭ
ಚಿಕ್ಕಮಗಳೂರು, ಡಿಸೆಂಬರ್ 07; ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ವಕೀಲನ ಮೇಲೆ ಪೊಲೀಸರು ಚಿಕ್ಕಮಗಳೂರಿನಲ್ಲಿ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಆದೇಶ ಹೊರಡಿಸಿತ್ತು.
ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ ಸಿಐಡಿ ಡಿಐಜಿಪಿ ವಂಶಿಕೃಷ್ಣ ತನಿಖೆಯ ಪ್ರಗತಿಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಹಲ್ಲೆಗೊಳಗಾದ ವಕೀಲ ಪ್ರೀತಂರನ್ನು ಸಹ ವಿಚಾರಣೆ ನಡೆಸಲಾಯಿತು. ಸಿಐಡಿ ಅಧಿಕಾರಿಗಳು ಬುಧವಾರದಿಂದ ನಗರದಲ್ಲಿಯೇ ಇದ್ದು, ತನಿಖೆ ಕೈಗೊಂಡಿದ್ದಾರೆ.

ಸಿಐಡಿ ಡಿಐಜಿಪಿ ವಂಶಿಕೃಷ್ಣ, ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ವಕೀಲ ಪ್ರೀತಂ ವಿಚಾರಣೆ ನಡೆಯಿತು. ಹೆಲ್ಮೆಟ್ ಹಾಕದ ಕಾರಣಕ್ಕೆ ಗಲಾಟೆ ಆರಂಭವಾದಾಗಿನಿಂದ ಠಾಣೆಯಲ್ಲಿ ಏನಾಯಿತು? ಎಂಬ ಸಂಪೂರ್ಣ ಮಾಹಿತಿಯನ್ನು ಸಿಐಡಿ ಪೊಲೀಸರು ಕಲೆ ಹಾಕಿದರು.
ವಕೀಲ ಪ್ರೀತಂ ವಿಚಾರಣೆ ಬಳಿಕ ಹಲ್ಲೆ ಪ್ರಕರಣದ ಆರೋಪಿಗಳಾದ 6 ಪೊಲೀಸ್ ಸಿಬ್ಬಂದಿಯನ್ನು ಸಹ ಸಿಐಡಿ ತಂಡ ವಿಚಾರಣೆ ನಡೆಸಲಿದೆ. ಉನ್ನತ ಮಟ್ಟದ ಅಧಿಕಾರಿಗಳಿಂದಲೇ ಪೊಲೀಸ್ ಮತ್ತು ವಕೀಲರ ಗಲಾಟೆ ವಿಚಾರಣೆ ನಡೆಯುತ್ತಿದೆ. ಚಿಕ್ಕಮಗಳೂರು ನಗರದಲ್ಲಿ ನವೆಂಬರ್ 30ರಂದು ನಡೆದಿದ್ದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಪೊಲೀಸರ ವಿಚಾರಣೆ; ವಕೀಲ ಪ್ರೀತಂ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಸಿಐಡಿ ಪೊಲೀಸರ ತಂಡ ಓರ್ವ ಪಿಎಸ್ಐ, ಓರ್ವ ಎಎಸ್ಐ, ಹೆಡ್‌ಕಾನ್ಸ್‌ಟೇಬಲ್ ಹಾಗೂ ಮೂವರು ಪೇದೆಗಳ ವಿಚಾರಣೆಯನ್ನು ನಡೆಸಲಿದೆ. ತನಿಖೆಯನ್ನು ಚುರುಕುಗೊಳಿಸಿ ಸರ್ಕಾರಕ್ಕೆ ಮುಂದಿನ ವಾರ ಮಧ್ಯಂತರ ವರದಿಯನ್ನು ಸಹ ಸಲ್ಲಿಕೆ ಮಾಡಬೇಕಿದೆ.
ವಕೀಲ ಪ್ರೀತಂ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣ ಚಿಕ್ಕಮಗಳೂರು ಪೊಲೀಸರು ಮತ್ತು ವಕೀಲರ ನಡುವೆ ಜಟಾಪಟಿಗೆ ಕಾರಣವಾಗಿದೆ. ಹೆಲ್ಮೆಟ್ ಹಾಕದ ಕಾರಣ ಲಾಯರ್ ಪ್ರೀತಂ ಮೇಲೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಹಲ್ಲೆ ಮಾಡಿದ ಪೊಲೀಸರನ್ನು ಬಂಧಿಸಬೇಕು ಎಂದು ವಕೀಲರು ಪಟ್ಟು ಹಿಡಿದಿದ್ದಾರೆ.
ಘಟನೆ ನಡೆದ ದಿನ ಮಾಧ್ಯಮಗಳ ಜೊತೆ ಮಾತನಾಡಿದ್ದ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, "ಈ ಘಟನೆ ಸಂಬಂಧ 6 ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ,. ಪ್ರಕರಣ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಓರ್ವ ಪಿಎಸ್ಐ, ಓರ್ವ ಎಎಸ್‌ಐ, ಓರ್ವ ಹೆಡ್ ಕಾನ್ಸ್‌ಟೇಬಲ್, ಮೂವರು ಕಾನ್ಸ್‌ಟೇಬಲ್ ಅಮಾನತು ಮಾಡಲಾಗಿದೆ" ಎಂದು ಹೇಳಿಕೆ ನೀಡಿದ್ದರು.
ಆದರೆ ವಕೀಲರು ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದು, ಕೋರ್ಟ್ ಕಲಾಪ ಬಹಿಷ್ಕಾರ ಮಾಡಿದ್ದಾರೆ. ಚಿಕ್ಕಮಗಳೂರು ಪೊಲೀಸರು ಸಹ ವಕೀಲರ ವಿರುದ್ಧ ಸಿಡಿದೆದ್ದಿದ್ದಾರೆ. ಚಿಕ್ಕಮಗಳೂರು ನಗರದ ರಸ್ತೆ ಬಂದ್ ಮಾಡಿ, ಹಲವು ಠಾಣೆಗಳಲ್ಲಿ ಕೆಲಸಗಳನ್ನು ನಿಲ್ಲಿಸಿ ಪೊಲೀಸರು ಪ್ರತಿಭಟನೆ ನಡೆಸಿದರು. ಎಫ್ಐಆರ್ ದಾಖಲಾಗಿರುವ ಪೊಲೀಸರನ್ನು ಬಂಧಿಸಬಾರದು ಎಂದು ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ವಕೀಲರು ಮತ್ತು ಪೊಲೀಸರ ನಡುವಿನ ಜಟಾಪಟಿ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಪ್ರಕರಣದ ಸಂಬಂಧ ಪೊಲೀಸ್ ಸಿಬ್ಬಂದಿ ದೂರು ನೀಡಿದ್ದು, ವಕೀಲ ಪ್ರೀತಂ ಸೇರಿದಂತೆ 6 ಮಂದಿ ವಕೀಲರ ವಿರುದ್ಧವೂ ದೂರು ದಾಖಲಾಗಿದೆ. ವಕೀಲ ಪ್ರೀತಂಗೆ ಜಾಮೀನು ಸಿಕ್ಕಿದೆ.
ಈ ಪ್ರಕರಣದಲ್ಲಿ ವಕೀಲರಾದ ಡಿ. ಬಿ. ಸುಜೇಂದ್ರ, ಎ. ಕೆ. ಭುವನೇಶ್, ಕೆ. ಬಿ. ನಂದೀಶ್ ಮತ್ತು ಎಚ್. ಎಂ. ಸುಧಾಕರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್ಐಆರ್ ರದ್ದುಪಡಿಸುವಂತೆ ಕೋರಿ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಬೈಕ್‍ನಲ್ಲಿ ತೆರಳುತ್ತಿದ್ದಾಗ ವಕೀಲ ಪ್ರೀತಂ ಹೆಲ್ಮೆಟ್ ಧರಿಸಿರಲಿಲ್ಲ. ದಂಡ ಕಟ್ಟುತ್ತೇನೆ ಎಂದು ಅವರು ಹೇಳಿದರೂ ಸಹ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ನಿಂದಿಸಲಾಗಿದೆ, ಹಲ್ಲೆ ನಡೆಸಲಾಗಿದೆ ಎಂಬುದು ಆರೋಪವಾಗಿದೆ. ಈ ಘಟನೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ದರು.












Click it and Unblock the Notifications