ಮತಿಘಟ್ಟ ಬಳಿ ಕಾರು ಮತ್ತು ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಮಗು ಸೇರಿ ಇಬ್ಬರು ಸಾವು
ಕಡೂರು, ಮೇ, 11: ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮತಿಘಟ್ಟ ಗ್ರಾಮದ ಕ್ರಾಸ್‌ನಲ್ಲಿ ನಡೆದಿದೆ.
ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಕಾರಿನಲ್ಲಿದ್ದ ಗಿರಿಧರ್ (46), ಮೂರು ವರ್ಷದ ಬಾಲಕ ಮಯಾಂಕ್ ಮೃತ ದುರ್ದೈವಿಗಳಾಗಿದ್ದಾರೆ.

ಸಂಬಂಧಿಕರ ಮದುವೆ ನಿಮಿತ್ತ ಹೊನ್ನಾವರದಿಂದ ಗಿರಿಧರ್ ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುತ್ತಿದ್ದ ಟಿ.ಟಿ.ವಾಹನ ಮತ್ತು ಕಾರು ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದ್ದು, ಮತ್ತೊಂದೆಡೆ ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೆ ಟಿ.ಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಕರ್ತವ್ಯನಿರತ ಪಿಎಸ್ಐ ಸಾವು
ಇಂತಹ ಅಪಘಾತಗಳು ಇದೇ ಮೊದಲೇನಲ್ಲ, ತುಂಬಾ ಕಡೆ ನಡೆದಿವೆ. ಕಾರು ಬ್ರಿಡ್ಜ್‌ಗೆ ಗುದ್ದಿದ್ದ ಪರಿಣಾಮ ಕರ್ತವ್ಯನಿರತ ಪಿಎಸ್ಐ ಸಾವನ್ನಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಬಳಿ ಗ್ರಾಮದ ಬಳಿ ಇತ್ತೀಚೆಗಷ್ಟೇ ನಡೆದಿತ್ತು.
ಮೂಲತಃ ನವಲಗುಂದ ತಾಲೂಕಿನ ಕುಮಾರಗೊಪ್ಪ ಗ್ರಾಮದ ನಿವಾಸಿಯಾದ ಇವರು ನಿಯಂತ್ರಣ ತಪ್ಪಿದ ಕಾರಣ ಕಾರು ಬ್ರಿಡ್ಜ್‌ಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಪಿಎಸ್ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ನವಲಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದರು.












Click it and Unblock the Notifications